ಗ್ಯಾರಂಟಿ ಕುರಿತ ವಿಪಕ್ಷಗಳ ಟೀಕೆಗೆ ಬಜೆಟ್ನಲ್ಲಿ ಉತ್ತರ : ಸಚಿವ ಎಚ್.ಕೆ.ಪಾಟೀಲ್
ʼಸಿಎಂ, ಅಧ್ಯಕ್ಷರ ಬದಲಾವಣೆ ಕಪೋಲಕಲ್ಪಿತʼ

ಎಚ್.ಕೆ.ಪಾಟೀಲ್
ಬಳ್ಳಾರಿ : ಗ್ಯಾರಂಟಿ ಯೋಜನೆಗಳ ಕುರಿತಾದ ವಿಪಕ್ಷಗಳ ಟೀಕೆಗಳಿಗೆ ಸರಕಾರ ಬಜೆಟ್ನಲ್ಲಿ ಉತ್ತರ ನೀಡಲಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ತಿಳಿಸಿದ್ದಾರೆ.
ಸೋಮವಾರ ಬಳ್ಳಾರಿಯಲ್ಲಿ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಶೀಘ್ರದಲ್ಲೇ ಗೃಹಜ್ಯೋತಿ, ಗೃಹ ಲಕ್ಷ್ಮೀ ಹಣ ಬಿಡುಗಡೆ ಮಾಡುತ್ತೇವೆ. ಗ್ಯಾರಂಟಿಗಳಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳುತ್ತೇವೆ. ಈಗಿನ ಗ್ಯಾರಂಟಿ ವ್ಯವಸ್ಥೆ ಬದಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಗ್ಯಾರಂಟಿಗಳಿಂದ ಆರ್ಥಿಕ ಹೊರೆಯಾಗುತ್ತಿರುವುದು ಸತ್ಯ. 50 ಸಾವಿರ ಕೋಟಿ ರೂ. ಸಣ್ಣ ಮೊತ್ತವಲ್ಲ. ಆದರೆ, ಗ್ಯಾರಂಟಿ ನಮ್ಮ ಬದ್ಧತೆ ಅದನ್ನು ಮುಂದುವರಿಸುತ್ತೇವೆ. ನಮ್ಮ ಶಾಸಕರು ಯಾರೂ ಗ್ಯಾರಂಟಿ ವಿರುದ್ಧವಾಗಿ ಮಾತನಾಡಿಲ್ಲ ಎಂದು ಎಚ್.ಕೆ.ಪಾಟೀಲ್ ಹೇಳಿದರು.
ಸಿಎಂ, ಅಧ್ಯಕ್ಷರ ಬದಲಾವಣೆ ಕಪೋಲಕಲ್ಪಿತ :
‘ಕೆಪಿಸಿಸಿ ಅಧ್ಯಕ್ಷರು ಹಾಗೂ ಮುಖ್ಯಮಂತ್ರಿ ಬದಲಾವಣೆ ಎಂಬ ಚರ್ಚೆಗಳು ಕಪೋಲಕಲ್ಪಿತ ಸುದ್ದಿಗಳಾಗಿದೆ. ಯಾವುದೇ ಬದಲಾವಣೆ ಚರ್ಚೆ ಇಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೇ ಹೇಳಿದ್ದಾರೆ. ಹೈಕಮಾಂಡ್ ಬಳಿಯೂ ಈ ಚರ್ಚೆ ಇಲ್ಲ. ಈ ವಿಷಯವಾಗಿ ಯಾರೂ ಮಾತನಾಡಬಾರದು’
-ಎಚ್.ಕೆ.ಪಾಟೀಲ್ ಕಾನೂನು ಸಚಿವ