ಅಭಿವೃದ್ಧಿ ಕೆಲಸಗಳಿಗೆ ಸಂಪನ್ಮೂಲ ಬೇಡವೇ? : ಸಿದ್ದರಾಮಯ್ಯ ಪ್ರಶ್ನೆ
ಬಳ್ಳಾರಿ: ‘ಗ್ಯಾರಂಟಿ ಯೋಜನೆಗಳಿಗೆ 60ಸಾವಿರ ಕೋಟಿ ರೂ.ಗಳನ್ನು ಈ ವರ್ಷ ಒದಗಿಸಬೇಕು. ಅಭಿವೃದ್ಧಿ ಕೆಲಸಗಳಿಗೆ ಸಂಪನ್ಮೂಲಗಳನ್ನು ಕ್ರೋಢೀಕರಿಸಬೇಕೋ ಬೇಡವೋ?’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಗೆ ಸಮರ್ಥನೆ ನೀಡಿದ್ದಾರೆ.
ಗುರುವಾರ ಜಿಲ್ಲೆಯ ತೋರಣಗಲ್ಲಿನಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ‘ಬಿಜೆಪಿಯವರು ಗ್ಯಾರಂಟಿ ಯೋಜನೆಗಳನ್ನು ರದ್ದು ಮಾಡಲು ಹೇಳಲಿ, ಹೇಳುತ್ತಾರೆಯೇ? ಎಂದರು. ಕೆಎಸ್ಸಾರ್ಟಿಸಿ ಬಸ್ ಟಿಕೆಟ್ ದರಗಳನ್ನು ಹೆಚ್ಚಿಸುವ ಪ್ರಸ್ತಾವನೆ ನಮ್ಮ ಮುಂದಿಲ್ಲ ಎಂದು ಸ್ಪಷ್ಟಪಡಿಸಿದರು.
ಮೋದಿಯವರು ಕೇಂದ್ರ ಅಬಕಾರಿ ತೆರಿಗೆ 9.48 ರೂ.ಇದ್ದುದ್ದನ್ನು 32.98 ರೂ.ಗಳಿಗೆ ಏರಿಸಿದರು. ನಾವು ಮಾಡಿದೆವೋ? ಅವರು ಹೆಚ್ಚು ಮಾಡಿದರು. ಮನಮೋಹನ್ ಸಿಂಗ್ ಪ್ರಧಾನಿಗಳಾಗಿದ್ದಾಗ ಒಂದು ಬ್ಯಾರೆಲ್ ಕಚ್ಛಾತೈಲಕ್ಕೆ 113 ಡಾಲರ್ ಇತ್ತು, ಈಗ ಎಷ್ಟಾಗಿದೆ ಎಂದು ತಿಳಿದುಕೊಳ್ಳಿ. 2015ರಲ್ಲಿ 50 ಡಾಲರ್ ಗೆ ಇಳಿದಾಗ ಬೆಲೆಯನ್ನು ಕಡಿಮೆ ಮಾಡಿದರೆ. ಒಮ್ಮೆ 27 ಡಾಲರ್ ಕಚ್ಛಾತೈದ ಬೆಲೆ ಇಳಿದಿತ್ತು. ಆಗ ಪೆಟ್ರೋಲ್ ಡೀಸೆಲ್ ಬೆಲೆ ಕಡಿಮೆ ಮಾಡಿದರೆ? ಬಿಜೆಪಿ ಹೆಚ್ಚಿಸಿದರೆ ಮಾಧ್ಯಮದವರು ಸುಮ್ಮನಿರುತ್ತಾರೆ. ತಿಳಿದುಕೊಳ್ಳುವ ಪ್ರಯತ್ನ ಮಾಡುವುದಿಲ್ಲ ಎಂದು ಅವರು ಹೇಳಿದರು.
ವಸ್ತುಸ್ಥಿತಿಯ ಮೇಲೆ ಆರೋಪ ಮಾಡಬೇಕು: ಆರೋಪಗಳನ್ನು ವಸ್ತುಸ್ಥಿತಿಯ ಮೇಲೆ ಮಾಡಬೇಕು. ಮೋದಿಯವರು ಇದ್ದಾಗ ಒಂದು ಲೀಟರ್ ಪೆಟ್ರೋಲ್ ಬೆಲೆ 72ರೂ.ಗಳಾಗಿತ್ತು. ಇಂದು 102 ರೂ. ಗಳಾಗಲು ಯಾರು ಕಾರಣ. ಒಂದು ಕಡೆ ಕಚ್ಛಾತೈಲದ ಬೆಲೆ ಕಡಿಮೆಯಾಗಿದ್ದರೆ, ಮತ್ತೊಂದೆಡೆ ಪೆಟ್ರೋಲ್ ಬೆಲೆ ಹೆಚ್ಚು ಮಾಡಲಾಗಿದೆ ಎಂದು ಅವರು ದೂರಿದರು.
ಬೆಲೆ ಕಡಿಮೆ ಇದೆ: ನಾವು ಬೆಲೆ ಏರಿಕೆ ಮಾಡಿರುವುದು ಅಭಿವೃದ್ಧಿಗಾಗಿ. ಡೀಸಲ್, ಪೆಟ್ರೋಲ್ ಮೇಲೆ 3 ರೂ.ಹೆಚ್ಚು ಮಾಡಿದರೂ ನೆರೆಯ ರಾಜ್ಯಗಳಿಗಿಂತಲೂ ಕಡಿಮೆ ಬೆಲೆ ಇದೆ. ವಾಹನ ಸಂಚಾರ ಹಾಗೂ ಪೆಟ್ರೋಲ್, ಡೀಸಲ್ ಹಾಕಿಸಿಕೊಳ್ಳುವುದು ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ವಾಹನಗಳು ಹೋಗಬಾರದು ಎಂಬ ಕಾರಣಕ್ಕಾಗಿ ಎಂದು ಅವರು ತಿಳಿಸಿದರು.
ಪರಿಶೀಲನೆ: ಸಂಡೂರಿನಲ್ಲಿ ಗಣಿಗಾರಿಕೆ ಮಾಡಲು ಪರಿಸರಪ್ರೇಮಿಗಳು ವಿರೋಧದ ಬಗ್ಗೆ ಕೇಂದ್ರ ಸಚಿವ ಕುಮಾರಸ್ವಾಮಿಯವರನ್ನು ಕೇಳಿ. ಒಂದು ಕಾಲದಲ್ಲಿ ಅವರೇ ವಿರೋಧಿಸಿ ಈಗ ಅವರೇ ಗಣಿಗಾರಿಕೆ ಮಾಡಿ ಎನ್ನುತ್ತಿದ್ದಾರೆ. ಈ ಬಗ್ಗೆ ಪರಿಶೀಲಿಸಲಾಗುವುದು ಎಂದರು.