ʼವಕ್ಫ್ʼ ವಿರುದ್ಧದ 2ನೇ ಹಂತದ ಹೋರಾಟಕ್ಕೆ ವಿಜಯೇಂದ್ರ ಕೂಡ ಕೈಜೋಡಿಸಬಹುದು : ರಮೇಶ್ ಜಾರಕಿಹೊಳಿ
ರಮೇಶ್ ಜಾರಕಿಹೊಳಿ
ಬಳ್ಳಾರಿ : ‘ವಕ್ಫ್ ಆಸ್ತಿ’ ಕಬಳಿಕೆ ವಿರುದ್ಧ ಬಿಜೆಪಿ ಬಂಡಾಯ ಬಣದ ನಾಯಕರ ಎರಡನೇ ಸುತ್ತಿನ ಹೋರಾಟ ಜನವರಿ 4ರಿಂದ ಆರಂಭಿಸಲಾಗುತ್ತಿದ್ದು, ಈ ಚಳವಳಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಕೂಡ ಕೈಜೋಡಿಸಬಹುದು ಎಂದು ಮಾಜಿ ಸಚಿವ ಹಾಗೂ ಗೋಕಾಕ್ ಕ್ಷೇತ್ರದ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಆಹ್ವಾಸಿದ್ದಾರೆ.
ರವಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ವಕ್ಫ್ ಆಸ್ತಿ ಕಬಳಿಕೆ ವಿರುದ್ಧ ಮೊದಲು ಹೋರಾಟ ಆರಂಭಿಸಿದ್ದು ಬಸನಗೌಡ ಪಾಟೀಲ್ ಯತ್ನಾಳ್. ಅನಂತರ ಎಲ್ಲರೂ ಬಂದು ಸೇರಿಕೊಂಡರು. ಕರಾಳವಾದ ಕಾನೂನನ್ನು ಪ್ರತಿಭಟಿಸಬೇಕೆಂಬ ನಮ್ಮ ಹೋರಾಟ ನಿರಂತರ. ನಮ್ಮದು ಪಕ್ಷಾತೀತ ಹೋರಾಟ. ಕಾಂಗ್ರೆಸ್ ನಾಯಕರೂ ಕೈಜೋಡಿಸಬಹುದು ಎಂದು ಹೇಳಿದರು.
‘ವಕ್ಫ್ ಹೋರಾಟವನ್ನು ಹಿಂದೂ-ಮುಸ್ಲಿಮರ ನಡುವಿನ ಸಂಘರ್ಷ ಎಂದು ಬಿಂಬಿಸಲಾಗುತ್ತಿದೆ. ಈ ಕಾಯಿದೆಯಿಂದ ಮುಸ್ಲಿಮರಿಗೂ ಅನ್ಯಾಯವಾಗಿದೆ. ಮಠ-ಮಂದಿರಗಳಿಗೂ ತೊಂದರೆಯಾಗಿದೆ. ಹೀಗಾಗಿ ದೇಶದಲ್ಲಿ ಅಸ್ತಿತ್ವದಲ್ಲಿರುವ ಕರಾಳ ಕಾಯಿದೆ ರದ್ದುಗೊಳ್ಳಬೇಕು. ಪ್ರಧಾನಿ ಮೋದಿ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತಾರೆಂಬ ವಿಶ್ವಾಸವಿದೆ ಎಂದು ಹೇಳಿದರು.
ಯತ್ನಾಳ್ ನೇತೃತ್ವದಲ್ಲಿ ನಮ್ಮ ತಂಡ ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಿಗೆ ಭೇಟಿ ನೀಡಲಿದೆ. ಅಲ್ಲಿ ಪರಿಶೀಲನೆ ನಡೆಸಿದ ಬಳಿಕ ಜ.4ರಂದು ಬಳ್ಳಾರಿ ಜಿಲ್ಲೆಯ ಕಂಪ್ಲಿಯಲ್ಲಿ ಸಮಾವೇಶ ನಡೆಸಲಾಗುವುದು.
ರಾಜ್ಯಾದ್ಯಂತ ವಕ್ಫ್ನಿಂದ ತೊಂದರೆಗೊಳಗಾಗುವವರ ದಾಖಲಾತಿಗಳು ಹಾಗೂ ಮಾಹಿತಿಗಳನ್ನು ಪಡೆದು ಜ.6 ಮತ್ತು 7 ರಂದು ಹೊಸದಿಲ್ಲಿಯಲ್ಲಿ ವಕ್ಫ್ ಸಂಬಂಧಿಸಿದ ಜಂಟಿ ಸದನ ಸಮಿತಿಗೆ ವರದಿ ಸಲ್ಲಿಸಲಾಗುವುದು ಎಂದು ಹೇಳಿದರು. ಈ ವೇಳೆ ಮಾಜಿ ಸಚಿವ ಕುಮಾರ್ ಬಂಗಾರಪ್ಪ ಹಾಜರಿದ್ದರು.