ಪಂಚಮಸಾಲಿ ಪ್ರಬಲ ನಾಯಕ ಯತ್ನಾಳ್ ಅವರ ಉಚ್ಚಾಟನೆಯನ್ನು ಮರು ಪರಿಶೀಲಿಸಬೇಕು : ಮಾಜಿ ಸಚಿವ ಬಿ.ಶ್ರೀರಾಮುಲು

ಶ್ರೀರಾಮುಲು
ಬಳ್ಳಾರಿ : ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಬಿಜೆಪಿಯ ಶಿಸ್ತು ಸಮಿತಿಯು ಆರು ವರ್ಷಗಳ ಕಾಲ ಉಚ್ಚಾಟನೆ ಮಾಡಿದ ನಿರ್ಧಾರವನ್ನು ಮರು ಪರಿಶೀಲಿಸಲು ಶ್ರೀರಾಮುಲು ಮನವಿ ಮಾಡಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಚಿವ ಬಿ.ಶ್ರೀರಾಮುಲು ಅವರು, ರಾಷ್ಟ್ರೀಯ ನಾಯಕರ ನಿರ್ಧಾರಕ್ಕೆ ನಾನು ಬದ್ಧ. ಆದರೆ ದೊಡ್ಡ ಸಮುದಾಯದ ನಾಯಕರನ್ನು ಕಳೆದುಕೊಳ್ಳುವುದು ಬೇಡ. ಪಂಚಮಸಾಲಿ ಹಾಗೂ ಲಿಂಗಾಯತ ಸಮುದಾಯದಲ್ಲಿ ಶೇ.20 ರಿಂದ 24 ರಷ್ಟು ಮತಗಳಿವೆ. ಈಗ ಪಂಚಮಸಾಲಿಯ ಪ್ರಬಲ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಿದ್ದಾರೆ, ಇದನ್ನು ಮರು ಪರಿಶೀಲನೆ ನಡೆಸಬೇಕು ಎಂದರು.
ನೀವು ನೇರ ನಿಷ್ಟುರವಾದಿ, ಹಿಂದುತ್ವವಾದಿಯಾಗಿದ್ದೀರಿ. ಈ ರೀತಿಯಾಗಿ ಮಾತನಾಡಿದರೆ ತೊಂದರೆಯಾಗುತ್ತದೆ ಎಂದು ಸಾಕಷ್ಟು ಬಾರಿ ಯತ್ನಾಳ್ ಅವರಿಗೆ ನಾನು ಹೇಳಿದ್ದೆ. ಯತ್ನಾಳ್ ಅವರ ಉಚ್ಚಾಟನೆ ನಿರ್ಧಾರ ಮರು ಪರಿಶೀಲಿಸಬೇಕು. ಅಮಿತ್ ಶಾ, ನಡ್ಡಾ, ಮೋದಿಜಿ ಅವರು ಈ ತೀರ್ಮಾನವನ್ನು ಮರು ಪರಿಶೀಲನೆ ಮಾಡಬೇಕು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.