ವಕ್ಫ್ ವಿಚಾರದಲ್ಲಿ ಯತ್ನಾಳ್ ರಾಜಕೀಯ ಪ್ರತಿಭಟನೆ : ಸಿಎಂ ಸಿದ್ದರಾಮಯ್ಯ
ಸಿದ್ದರಾಮಯ್ಯ
ಬಳ್ಳಾರಿ : ಕೇಂದ್ರ ಸರಕಾರವು ವಕ್ಫ್ ಬೋರ್ಡ್ ಕಾನೂನಿಗೆ ತಿದ್ದುಪಡಿ ತರುವ ಬಗ್ಗೆ ಪರಿಶೀಲನೆ ನಡೆಸುತ್ತಿದೆ. ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ರಾಜಕೀಯವಾಗಿ ಪ್ರತಿಭಟನೆ ಮಾಡುತ್ತಿದ್ದಾರೆ. ಜಂಟಿ ಸಂಸದೀಯ ಸಮಿತಿಯವರು ಭೇಟಿ ನೀಡಿದ್ದೂ ಕೂಡ ರಾಜಕೀಯವಾಗಿಯೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ವಿಜಯಪುರಕ್ಕೆ ಜಂಟಿ ಸಂಸದೀಯ ಸಮಿತಿಯ ಅಧ್ಯಕ್ಷ ಭೇಟಿ ನೀಡಿರುವುದು ಹಾಗೂ ಬಸವನಗೌಡ ಪಾಟೀಲ್ ಯತ್ನಾಳ್ ಪ್ರತಿಭಟನೆ ಮಾಡುತ್ತಿರುವ ಬಗ್ಗೆ ಗುರುವಾರ ಸಂಡೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಅವರು ಈ ಮೇಲಿನಂತೆ ಪ್ರತಿಕ್ರಿಯೆ ನೀಡಿದರು.
ಸಮಸ್ಯೆ ಎಲ್ಲಿದೆ?: ಒಂದು ವೇಳೆ ಯಾರಿಗಾದರೂ ನೋಟೀಸ್ ನೀಡಲಾಗಿದ್ದರೆ ಅದನ್ನು ವಾಪಸ್ ಪಡೆಯುವುದಾಗಿ ಸ್ಪಷ್ಟವಾಗಿ ಈಗಾಗಲೇ ತಿಳಿಸಲಾಗಿದೆ. ಯಾರನ್ನೂ ನಾವು ಒಕ್ಕಲೆಬ್ಬಿಸುವುದಿಲ್ಲ. ಒಂದು ವೇಳೆ ದಾಖಲಾತಿಗಳು ತಿದ್ದುಪಡಿಯಾಗಿದ್ದರೆ ಅದನ್ನು ರದ್ದು ಮಾಡುತ್ತೇವೆ ಎಂದು ಹೇಳಿದ ಮೇಲೆ ಸಮಸ್ಯೆ ಎಲ್ಲಿದೆ ಎಂದು ಮುಖ್ಯಮಂತ್ರಿ ಪ್ರಶ್ನಿಸಿದರು.
ಕಾಂಗ್ರೆಸ್ ಪಕ್ಷಕ್ಕೆ ನಿರೀಕ್ಷೆಗೂ ಮೀರಿ ಜನಸ್ಪಂದನೆ: ಉಪಚುನಾವಣೆಯ ಪ್ರಚಾರ ಸಭೆಗಳಲ್ಲಿ ನಿರೀಕ್ಷೆಗೂ ಮೀರಿ ಜನರು ತಮ್ಮ ಬೆಂಬಲವನ್ನು ವ್ಯಕ್ತಪಡಿಸುತ್ತಿದ್ದು, ಸಂಡೂರು, ಶಿಗ್ಗಾಂವಿ ಹಾಗೂ ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.