ಬೆಂಗಳೂರು | ಅಂಗಡಿಯಲ್ಲಿದ್ದ ಆಕ್ಸಿಜನ್ ಸಿಲಿಂಡರ್ ಸ್ಫೋಟ: ನೌಕರ ಮೃತ್ಯು
ಬೆಂಗಳೂರು, ಜೂ. 30: ಆಕ್ಸಿಜನ್ ಸಿಲಿಂಡರ್ ಸ್ಫೋಟಗೊಂಡು ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಹಲಸೂರು ಗೇಟ್ ಪೊಲೀಸ್ ಠಾಣಾ ವ್ಯಾಪ್ತಿಯ ನಗರತ್ ಪೇಟೆಯಲ್ಲಿ ನಡೆದಿದೆ.
ಮಹಾರಾಷ್ಟ್ರ ಮೂಲದ ವಿಷ್ಣು ಸಾವಂತ್ ಮೃತ ವ್ಯಕ್ತಿಯಾಗಿದ್ದು, ಅವರ ಪತ್ನಿ ವೈಜಯಂತಿ ಎಂಬವರಿಗೆ ಸುಟ್ಟ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ.
ಅಂಬಿಕಾ ರಿಫೈನರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ನರೇಂದ್ರ ಸೋನಿ ಎಂಬುವರು ನೀಡಿದ ದೂರಿನ ಮೇರೆಗೆ ಅಂಗಡಿ ಮಾಲಕರಾದ ರಮೇಶ್ ಕೊಠಾರಿ, ಮಹೇಶ್ ಕೊಠಾರಿ, ಕಟ್ಟಡ ಮಾಲಕರು ಸೇರಿ ಒಟ್ಟು ಆರು ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಕಳೆದೊಂದು ವರ್ಷಗಳಿಂದ ನಗರತ್ಪೇಟೆಯ ಅಂಬಿಕಾ ರಿಫೈನರಿ ಅಂಗಡಿಯಲ್ಲಿ ದಂಪತಿ ಚಿನ್ನಾಭರಣ ಕರಗಿಸುವ ಕೆಲಸ ಮಾಡಿಕೊಂಡು ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದರು. ಗುರುವಾರ ಮಧ್ಯಾಹ್ನ ಹೆಂಡತಿ ಊಟದ ಬಾಕ್ಸ್ ತೆಗೆದುಕೊಂಡು ಬಂದಾಗ ಸಿಲಿಂಡರ್ ಸ್ಫೋಟಗೊಂಡಿದೆ. ಪರಿಣಾಮ ಪಕ್ಕದಲ್ಲೇ ಇದ್ದ ದಂಪತಿ ಗಂಭೀರ ಗಾಯಗೊಂಡಿದ್ದಾರೆ. ಸ್ಥಳೀಯರ ನೆರವಿನಿಂದ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ವಿಷ್ಣು ಸಾವಂತ್ ಸಾವನ್ನಪ್ಪಿದ್ದಾರೆ. ಪತ್ನಿಗೆ ಸುಟ್ಟ ಗಾಯವಾಗಿರುವುದರಿಂದ ಚಿಕಿತ್ಸೆ ಪಡೆಯುತ್ತಿರುವುದಾಗಿ ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸಗೌಡ ತಿಳಿಸಿದ್ದಾರೆ.