ನನಗಿಂತ ಬುದ್ಧಿವಂತರು ಇದ್ದರೆ ಅವರನ್ನೇ ಬಿಜೆಪಿ ರಾಜ್ಯಾಧ್ಯಕ್ಷ ಮಾಡಿ: ವಿ. ಸೋಮಣ್ಣ
ಬೆಂಗಳೂರು: ''ಕೆಲಸ ಮಾಡಲು ವರಿಷ್ಠರ ಬಳಿ ಅವಕಾಶ ಕೇಳಿದ್ದೇನೆ. ನನಗಿಂತ ಬುದ್ಧಿವಂತರು ಇದ್ದರೆ ಅವರನ್ನೇ ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಮಾಡಲಿ'' ಎಂದು ಮಾಜಿ ಸಚಿವ ವಿ. ಸೋಮಣ್ಣ ಹೇಳಿದ್ದಾರೆ.
ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ನಳಿನ್ ಕುಮಾರ್ ಕಟೀಲ್ ಪಕ್ಷದ ಶ್ರಮಜೀವಿ. ಅವರು ವಿಧಾನಸಭೆ ಸೋಲಿನ ಹೊಣೆ ಹೊತ್ತಿದ್ದಾರೆ. ಅವರು ದೂರದೃಷ್ಟಿ ಇರುವ ವ್ಯಕ್ತಿ. ನಾನೂ ನಿದ್ದೆ ಮಾಡುವವನಲ್ಲ, ನಿದ್ದೆ ಮಾಡಲು ಬಿಡುವವನೂ ಅಲ್ಲ. ಹಿಂದೆ ಮುಂದೆ ಮಾತಾಡುವವರ ನೀತಿಪಾಠ ಗೊತ್ತು. ನಾನು ಕೇವಲ ಪಕ್ಷ ಕೊಡುವ ಜವಾಬ್ದಾರಿ ನಿರ್ವಹಿಸುತ್ತೇನೆ' ಎಂದರು.
''ಚುನಾವಣೆ ಸೋಲಿನ ಬಳಿಕ ಮೊದಲ ಬಾರಿ ಕಚೇರಿಗೆ ಬಂದಿದ್ದೇನೆ. ಪಕ್ಷಕ್ಕಿಂತ ಯಾರೂ ದೊಡ್ಡವರಲ್ಲ ಎಂಬುದನ್ನು ನಂಬಿದವನು ನಾನು. ಗೋವಿಂದರಾಜನಗರದಲ್ಲಿ 480 ಕೋಟಿ ರೂ.ಗೂ ಹೆಚ್ಚಿನ ಕೆಲಸ ಮಾಡಿರುವೆ. ಆಸ್ಪತ್ರೆ, ಶಾಲೆ, ಕಾಲೇಜು ಸೇರಿ ಹಲವು ಅಭಿವೃದ್ಧಿ ಕೆಲಸ ಮಾಡಿದ್ದೇನೆ. ನಾನು ಮನೆಯಲ್ಲಿ ಆರಾಮಾಗಿ ಮಲಗಿದ್ದರೂ ಗೆಲ್ಲುತ್ತಿದೆ. ಆದರೆ ಪಕ್ಷ ನೀಡಿದ ಟಾಸ್ಕ್ ಪೂರೈಸಲು ಕ್ಷೇತ್ರ ಬಿಟ್ಟು ಹೋದೆ. ವರುಣಾ ಹಾಗೂ ಚಾಮರಾಜನಗರ ಎರಡೂ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದೆ. ಎರಡು ಕ್ಷೇತ್ರಗಳಲ್ಲೂ ಸೋತು ಈಗ ನಿರುದ್ಯೋಗಿ ಆಗಿ ಮನೆಯಲ್ಲಿ ಕುಳಿತಿದ್ದೇನೆ'' ಎಂದು ಬೇಸರ ವ್ಯಕ್ತಪಡಿಸಿದರು.