ಬಿಎಂಟಿಸಿ ಎಂ.ಡಿ., ನಿರ್ದೇಶಕರ ನಕಲಿ ಸಹಿ ಮಾಡಿ ಲಕ್ಷಾಂತರ ರೂ. ವಂಚನೆ: ಏಳು ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲು
ಬೆಂಗಳೂರು, ಜು.31: ಬಿಎಂಟಿಸಿಯ ಟೆಂಡರ್ಗಳ ನೀಡಿಕೆ, ಫ್ಲ್ಯಾಟ್ಗಳು ಮತ್ತು ವಾಣಿಜ್ಯ ಮಳಿಗೆಗಳ ಹಂಚಿಕೆ, ಟೆಂಡರ್ ಅವಧಿ ವಿಸ್ತರಣೆಗೆ ಸಂಬಂಧಿಸಿ ಕಡತಗಳಿಗೆ ಸಂಸ್ಥೆಯ ಹಿರಿಯ ಅಧಿಕಾರಿಗಳ ಹೆಸರಿನಲ್ಲಿ ನಕಲು ಸಹಿ ಮಾಡಿ ಲಕ್ಷಾಂತರ ರೂ. ವಂಚಿಸಿದ ಆರೋಪದಲ್ಲಿ ಬಿಎಂಟಿಸಿಯ ಏಳು ಅಧಿಕಾರಿಗಳ ವಿರುದ್ಧ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಿಎಂಟಿಸಿಯ ಭದ್ರತಾ ಮತ್ತು ಜಾಗೃತ ದಳದ ಸಹಾಯಕ ಅಧಿಕಾರಿ ಸಿ.ಕೆ.ರಮ್ಯಾ ನೀಡಿದ ದೂರು ಆಧರಿಸಿ ಮುಖ್ಯ ಸಂಚಾರ ವ್ಯವಸ್ಥಾಪಕ ಶ್ರೀರಾಮ್ ಮುಲ್ಕಾವಾನ್, ವಿಭಾಗೀಯ ಸಂಚಾಲನಾ ಅಧಿಕಾರಿ ಶ್ಯಾಮಲಾ ಎಸ್.ಮುದ್ದೋಡಿ, ಸಹಾಯಕ ಸಂಚಾರ ವ್ಯವಸ್ಥಾಪಕಿ ಬಿ.ಕೆ.ಮಮತಾ, ಸಹಾಯಕ ಸಂಚಾರ ನಿರೀಕ್ಷಕಿ ಗುಣಶೀಲ, ಸಹಾಯಕ ಸಂಚಾರ ಅಧೀಕ್ಷಕಿ ಟಿ.ಅನಿತಾ, ಸಂಚಾರ ನಿರೀಕ್ಷಕರಾದ ಗೋಪಿ ಮತ್ತು ಸತೀಶ್, ಕಿರಿಯ ಸಹಾಯಕ ಪ್ರಕಾಶ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಆರೋಪಿಗಳು ಈ ಹಿಂದೆ ಬಿಎಂಟಿಸಿಯ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಅನ್ಬು ಕುಮಾರ್, ನಿರ್ದೇಶಕರಾಗಿದ್ದ ಸೂರ್ಯಸೇನ್ ಅವರ ಹೆಸರಿನಲ್ಲಿ ವಾಣಿಜ್ಯ ಶಾಖೆಯ ಟೆಂಡರ್ಗಳಿಗೆ ಸಂಬಂಧಿಸಿದ ಕಡತಗಳಿಗೆ ನಕಲಿ ಸಹಿ ಮಾಡಿ ಸಂಸ್ಥೆಗೆ 4.35 ಲಕ್ಷ ರೂ. ನಷ್ಟ ಉಂಟು ಮಾಡಿದ್ದಾರೆ. ಅಲ್ಲದೆ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ರೇಜು ಸಹಿಯನ್ನು ನಕಲು ಮಾಡಿ ಕಡಿಮೆ ಬಿಡ್ದಾರರಿಗೆ ಪರವಾನಿಗೆ ನೀಡಿ ಸಂಸ್ಥೆಗೆ 9.41 ಲಕ್ಷ ರೂ. ನಷ್ಟ ಉಂಟು ಮಾಡಿದ್ದಾರೆ ಎಂದು ಸಿ.ಕೆ.ರಮ್ಯಾ ಪೊಲೀಸ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಮಲ್ಲಸಂದ್ರ ಬಸ್ ನಿಲ್ದಾಣದ ವಾಣಿಜ್ಯ ಸಂಕೀರ್ಣದ ಹಂಚಿಕೆಗೆ ಸಂಬಂಧಿಸಿದ ಕಡತಕ್ಕೆ ಬಿಎಂಟಿಸಿಯ ಹಿಂದಿನ ವ್ಯವಸ್ಥಾಪಕ ನಿರ್ದೇಶಕಿ ಶಿಖಾ, ಭದ್ರತೆ ಮತ್ತು ಜಾಗೃತ ದಳದ ನಿರ್ದೇಶಕ ಕೆ.ಅರುಣ್ರ ಹೆಸರಿನಲ್ಲೂ ಫೋರ್ಜರಿ ಸಹಿ ಮಾಡಿದ್ದಾರೆ. ವಾಣಿಜ್ಯ ಸಂಕೀರ್ಣದ ಪರವಾನಿಗೆದಾರ ಜಗದೀಶ್ ಅವರಿಗೆ ಅಕ್ರಮವಾಗಿ ಪರವಾನಿಗೆ ಅವಧಿ ವಿಸ್ತರಿಸಿ ಕೊಟ್ಟು ಬಿಎಂಟಿಸಿಗೆ 52.15 ಲಕ್ಷ ರೂ. ನಷ್ಟ ಉಂಟು ಮಾಡಿದ್ದಾರೆ ಎಂದು ರಮ್ಯಾ ಅವರು ದೂರಿನಲ್ಲಿ ತಿಳಿಸಿದ್ದಾರೆ.
ಬಿಟಿಎಂ ಲೇಔಟ್ನ ಬಸ್ ನಿಲ್ದಾಣದ ಸ್ವಚ್ಛತಾ ನಿರ್ವಹಣೆ ಟೆಂಡರ್ಗೆ ಸಂಬಂಧಿಸಿದಂತೆ ಮೆನ್ ಮೆಂಟರ್ ಸ್ಪೆಷಾಲಿಟಿ ಪ್ರೈವೇಟ್ ಲಿಮಿಟೆಡ್ ಸಂಸ್ಥೆಗೆ ಹೆಚ್ಚುವರಿಯಾಗಿ 10.65 ಲಕ್ಷ ರೂ.ಗಳನ್ನು ನಿರ್ವಹಣಾ ವೆಚ್ಚ ಪಾವತಿಸಿದ್ದಾರೆ. ಈ ಟೆಂಡರ್ಗೆ ಸಂಬಂಧಿಸಿದ ದಾಖಲೆ ಪತ್ರಗಳಿಗೆ ಬಿಎಂಟಿಸಿಯ ಹಿಂದಿನ ವ್ಯವಸ್ಥಾಪಕ ನಿರ್ದೇಶಕ ಅನ್ಬುಕುಮಾರ್, ನಿರ್ದೇಶಕ ಸೂರ್ಯಸೇನ್ರ ಸಹಿಯನ್ನು ಫೋರ್ಜರಿ ಮಾಡಲಾಗಿದೆ ಎಂದು ದೂರಿನಲ್ಲಿ ವಿಧಿಸಲಾಗಿದೆ.
ಬಿಎಂಟಿಸಿ ಬಸ್ ನಿಲ್ದಾಣಗಳ ಆವರಣದಲ್ಲಿ ಜಾಹೀರಾತು ನೀಡಿಕೆ, ಬ್ಯಾಂಕ್ ಎಟಿಎಂ ಘಟಕಗಳ ಜಾಗದ ಪರವಾನಗಿ ಅವಧಿ ವಿಸ್ತರಣೆ, ಬಿಎಂಟಿಸಿಯ ಫ್ಲ್ಯಾಟ್ಗಳ ಹಂಚಿಕೆಗೆ ಸಂಬಂಧಪಟ್ಟ ಕಡತಗಳಿಗೆ ತಪ್ಪಿತಸ್ಥ ಅಧಿಕಾರಿಗಳು ಸಂಸ್ಥೆಯ ಹಾಲಿ ವ್ಯವಸ್ಥಾಪಕ ನಿರ್ದೇಶಕಿ ಜಿ.ಸತ್ಯವತಿ, ಹಿಂದಿನ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಭದ್ರತೆ ಮತ್ತು ಜಾಗೃತ ದಳದ ನಿರ್ದೇಶಕರ ಹೆಸರಿನಲ್ಲಿ ನಕಲಿ ಸಹಿ ಮಾಡಿ ಅಕ್ರಮ ಎಸಗಿದ್ದಾರೆ. ಇದರಿಂದ ಸಂಸ್ಥೆಗೆ ಸಾಕಷ್ಟು ವಂಚನೆಯಾಗಿದೆ. ಅಧಿಕಾರಿಗಳ ಅಕ್ರಮವು ಈಗಾಗಲೇ ಇಲಾಖಾ ತನಿಖೆಯಲ್ಲಿ ದೃಢಪಟ್ಟಿದೆ ಎಂದು ರಮ್ಯಾ ದೂರಿನಲ್ಲಿ ತಿಳಿಸಿದ್ದಾರೆ.
ದೂರಿನ ಹಿನ್ನೆಲೆಯಲ್ಲಿ ಆರೋಪಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.