ಮೂಢನಂಬಿಕೆಗೆ ತೆರೆ ಎಳೆದ ಸಿಎಂ; ವಾಸ್ತು ಸರಿ ಇಲ್ಲವೆಂದು ಬಂದ್ ಮಾಡಲಾಗಿದ್ದ ಬಾಗಿಲು ತೆರೆದು ಹೆಜ್ಜೆ ಇಟ್ಟ ಸಿದ್ದರಾಮಯ್ಯ
ಬೆಂಗಳೂರು, ಜೂ. 24: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೌಢ್ಯ ಧಿಕ್ಕರಿಸಿ, ವಾಸ್ತು ದೋಷದ ನೆಪದಲ್ಲಿ ಬಾಗಿಲು ಮುಚ್ಚಿದ್ದ ವಿಧಾನಸೌಧದಲ್ಲಿನ ತಮ್ಮ ಕಚೇರಿಯ ದಕ್ಷಿಣ ದ್ವಾರವನ್ನು ತೆರೆಸಿ, ಆ ಬಾಗಿಲಿನ ಮೂಲಕವೇ ಕಚೇರಿಯನ್ನು ಪ್ರವೇಶಿಸಿದ ಪ್ರಸಂಗ ನಡೆಯಿತು.
ಶನಿವಾರ ವಿಧಾನಸೌಧದ ಮೂರನೆ ಮಹಡಿಯಲ್ಲಿನ ತಮ್ಮ ಕೊಠಡಿಯಲ್ಲಿ ಅನ್ನಭಾಗ್ಯ ಯೋಜನೆ ಜಾರಿಗೊಳಿಸುವ ಸಂಬಂಧ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಲು ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ದಕ್ಷಿಣ ದ್ವಾರ ಮುಚ್ಚಿರುವುದನ್ನು ಗಮನಿಸಿದರು. ಸಿದ್ದರಾಮಯ್ಯ, ‘ಏಕೆ ಈ ದ್ವಾರ ಮುಚ್ಚಿರುವುದು’ ಎಂದು ಪ್ರಶ್ನಿಸಿದರು.
ಆಗ ಅಧಿಕಾರಿಗಳು, ‘ವಾಸ್ತು ಕಾರಣದಿಂದ ಬಂದ್ ಮಾಡಲಾಗಿದೆ’ ಎನ್ನುವ ಉತ್ತರ ನೀಡಿದರು. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಆ ದ್ವಾರದಲ್ಲೇ ನಿಂತರು. ನಿತ್ಯ ಕಚೇರಿ ಪ್ರವೇಶಿಸುವ ಪಶ್ಚಿಮ ದ್ವಾರದಿಂದ ಸಿಬ್ಬಂದಿ ಕಚೇರಿಯ ಒಳಗೆ ಹೋಗಿ ದಕ್ಷಿಣ ದ್ವಾರವನ್ನು ತೆರೆದ ಬಳಿಕ ಅದೇ ದ್ವಾರದ ಮೂಲಕವೇ ತಮ್ಮ ಕಚೇರಿಯನ್ನು ಪ್ರವೇಶಿಸಿದರು.
‘ಆರೋಗ್ಯಕರ ಮನಸ್ಸು, ಸ್ವಚ್ಚ ಹೃದಯ, ಜನಪರ ಕಾಳಜಿ, ಒಳ್ಳೆ ಗಾಳಿ ಬೆಳಕು ಬರುವಂತಿದ್ದರೆ ಅದೇ ಉತ್ತಮ ವಾಸ್ತು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಹಿರಿಯ ಅಧಿಕಾರಿಗಳ ಜತೆ ನಮ್ಮ ನಿಲುವನ್ನು ಹಂಚಿಕೊಂಡರು.