ಬೆಂಗಳೂರು | ಸ್ನೇಹಿತರ ಜೊತೆ ಸೇರಿ ಲೈಂಗಿಕ ಕಿರುಕುಳ ನೀಡಿದ ಆರೋಪ; ಪತಿ ವಿರುದ್ಧ ದೂರು ದಾಖಲಿಸಿದ ಪತ್ನಿ
ಬೆಂಗಳೂರು, ಜೂ.30: ಮಾದಕ ವ್ಯಸನಿಯಾಗಿದ್ದ ಪತಿ ಸ್ನೇಹಿತರ ಜೊತೆ ಸೇರಿ ತನ್ನ ಖಾಸಗಿ ವಿಡಿಯೋ ಮಾಡಿ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಿ ಪತಿ ವಿರುದ್ಧ ಮಹಿಳಾ ಸಾಫ್ಟ್ವೇರ್ ಇಂಜಿನಿಯರ್ ನಗರದ ಎಚ್ಎಸ್ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಆಂಧ್ರಪ್ರದೇಶದ ಕಾಕಿನಾಡ ಮೂಲದ ಪತಿ ಅಖಿಲೇಶ್ ಧರ್ಮರಾಜ್ ವಿರುದ್ಧ ದೂರು ನೀಡಲಾಗಿದ್ದು, ಪ್ರಕರಣ ದಾಖಲಿಸಿರುವ ಪೊಲೀಸರು ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.
ಈ ದಂಪತಿಯು 2019 ರಲ್ಲಿ ಮ್ಯಾಟ್ರಿಮೋನಿಯಲ್ ಸೈಟ್ ಮೂಲಕ ಭೇಟಿಯಾಗಿದ್ದು, ಆರಂಭದಲ್ಲಿ ಆರೋಪಿ ಉತ್ತಮ ನಡತೆ ಹೊಂದಿದ್ದರೂ, ನಂತರ ಆತ ಮಾದಕ ವ್ಯಸನಿ ಎಂಬುದು ಸಂತ್ರಸ್ತೆಗೆ ತಿಳಿದು ಬಂದಿದೆ.
ಆರೋಪಿಯು ಮನೆಗೆ ಗಾಂಜಾ ತಂದು ಆಕೆಯ ಮುಂದೆ ಧೂಮಪಾನ ಮಾಡಲು ಶುರು ಮಾಡಿದ್ದು ಪ್ರಶ್ನಿಸಿದಾಗ ಆಕೆಗೆ ಚಿತ್ರ ಹಿಂಸೆ ನೀಡಿ ಸ್ನೇಹಿತರನ್ನು ಮನೆಗೆ ಕರೆತಂದು ಮನೆಯಲ್ಲಿ ಗಾಂಜಾ ಪಾರ್ಟಿ ಶುರುವಿಟ್ಟುಕೊಂಡಿದ್ದಾನೆ. ಆರೋಪಿಯ ಸ್ನೇಹಿತರು ಕೂಡ ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಸಂತ್ರಸ್ತೆ ಪೊಲೀಸರಿಗೆ ತಿಳಿಸಿದ್ದಾಳೆ.
ಲೈಂಗಿಕ ಕಿರುಕುಳ ತಾಳಲಾರದೆ ತನ್ನ ಪೋಷಕರ ನಿವಾಸಕ್ಕೆ ಟೆಕ್ಕಿ ತೆರಳಿದಾಗ ಅಲ್ಲಿಗೂ ತನ್ನ ಸ್ನೇಹಿತರೊಂದಿಗೆ ಹೋಗಿದ್ದ ಆರೋಪಿ, ಮನೆಗೆ ಬರುವಂತೆ, ಏನಾದರೂ ವಿಷಯ ಬಹಿರಂಗಪಡಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಅಲ್ಲದೇ, ಆಕೆ ಮಲಗುವ ಕೋಣೆ ಮತ್ತು ಬಾತ್ ರೂಂನಲ್ಲಿ ಸಿಸಿಟಿವಿಗಳನ್ನು ಅಳವಡಿಸಿದ್ದನ್ನು ಪ್ರಶ್ನಿಸಿದಾಗ ಆಕೆಯ ಮೇಲೆ ಹಲ್ಲೆ ನಡೆಸಿದ್ದು, ಖಾಸಗಿ ವಿಡಿಯೋಗಳನ್ನು ಸಾರ್ವಜನಿಕಗೊಳಿಸುವುದಾಗಿ ತಿಳಿಸಿದ್ದಾನೆಂದು ಸಂತ್ರಸ್ತೆ ಆರೋಪಿಸಿದ್ದಾಳೆ.
ಈ ಸಂಬಂಧ ಸುಬ್ರಹ್ಮಣ್ಯಪುರ ಠಾಣೆಗೆ ದೂರು ನೀಡಿದ್ದರೂ ಪೊಲೀಸರು ಆರೋಪಿಗಳ ವಿರುದ್ಧ ಕ್ರಮ ಕೈಗೊಂಡಿಲ್ಲ ಎಂದು ಮಹಿಳೆ ಆರೋಪಿಸಿದ್ದು, ಈ ಬಗ್ಗೆಯೂ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ಎಚ್ಎಸ್ಆರ್ ಲೇಔಟ್ ಠಾಣಾ ಪೊಲೀಸರು ತಿಳಿಸಿದ್ದಾರೆ.