ಮರಾಠಾ ಸಮುದಾಯ ಭವನ ನಿರ್ಮಾಣಕ್ಕೆ 25 ಲಕ್ಷ ರೂ. ನೀಡಲಾಗುವುದು : ಸಂಸದ ಸಾಗರ್ ಖಂಡ್ರೆ

ಬೀದರ್ : ನಗರದ ನೌಬಾದ್ ನಲ್ಲಿ ಕ್ಷತ್ರಿಯ ಮರಾಠಾ ಸಮುದಾಯ ಭವನ ನಿರ್ಮಾಣದ ಕೆಲಸ ಅರ್ಧಕ್ಕೆ ನಿಂತಿದ್ದು, ಕೂಡಲೇ ಈ ಭವನ ನಿರ್ಮಾಣದ ಕೆಲಸ ಪೂರ್ಣಗೊಳಿಸಲು ಸಂಸದರ ಅನುದಾನದಲ್ಲಿ 25 ಲಕ್ಷ ರೂ. ನೀಡಲಾಗುವುದು ಎಂದು ಸಂಸದ ಸಾಗರ್ ಖಂಡ್ರೆ ಅವರು ಭರವಸೆ ನೀಡಿದರು.
ಇಂದು ನಗರದ ಸರ್ಕಾರಿ ನೌಕರರ ಸಮುದಾಯ ಭವನದಲ್ಲಿ ಮರಾಠಾ ಸಮಾಜದ ವತಿಯಿಂದ ಸಂಸದ ಸಾಗರ ಖಂಡ್ರೆ ಹಾಗೂ ಎಂ ಎಲ್ ಸಿ ಡಾ.ಎಂ.ಜಿ ಮೂಳೆ ಅವರಿಗೆ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮರಾಠಾ ಸಮಾಜದ ಅಭಿವೃದ್ಧಿಗೆ ನಾನು ನಿರಂತರವಾಗಿ ಶ್ರಮಿಸುವೆ. ಬೀದರ್ ಜಿಲ್ಲೆಗೆ ಮರಾಠಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನ ನೀಡಬೇಕು ಎಂದು ಹೈಕಮಾಂಡ್ ಮಟ್ಟದಲ್ಲಿ ಚರ್ಚಿಸಲು ಪ್ರಯತ್ನ ಮಾಡುವೆ ಎಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಡಾ.ಎಂ.ಜಿ.ಮೂಳೆ ಅವರು ಮಾತನಾಡಿ, ಮರಾಠಾ ಸಮಾಜವನ್ನು 2ಎ ಗೆ ಸೇರ್ಪಡೆ ಮಾಡಬೇಕು. ಕರ್ನಾಟಕ ಮರಾಠ ಅಭಿವೃದ್ಧಿ ನಿಗಮ ಅಧ್ಯಕ್ಷ ಸ್ಥಾನದ ಭರ್ತಿ ಮಾಡಬೇಕು. ಮರಾಠಾ ಸಮುದಾಯದ ಮಕ್ಕಳು ಉನ್ನತ ವ್ಯಾಸಂಗಕ್ಕಾಗಿ ವಿದೇಶಕ್ಕೆ ತೆರಳಿದರೆ ನಿಗಮದ ವತಿಯಿಂದ 50 ಲಕ್ಷ ರೂ. ಅನುದಾನವಿದೆ. ಈಗಾಗಲೇ ಜಿಲ್ಲೆಯ ಒಬ್ಬ ವಿದ್ಯಾರ್ಥಿಗೆ ಸರ್ಕಾರ ಹಣ ಬಿಡುಗಡೆ ಮಾಡಿದೆ. ಹೀಗಾಗಿ ಅವಶ್ಯಕತೆ ಇರುವ ವಿದ್ಯಾರ್ಥಿಗಳು ಅರ್ಜಿ ಭರ್ತಿ ಮಾಡಿ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಮರಾಠ ನಿಗಮ ಮಂಡಳಿ ವತಿಯಿಂದ ಸರ್ಕಾರ ಅನೇಕ ಸೌಲಭ್ಯಗಳು ಸಮಾಜದ ಜನರಿಗೆ ನೀಡುತ್ತಿದ್ದು, ಜನರು ಈ ಕುರಿತು ತಿಳಿದುಕೊಂಡು ಸದುಪಯೋಗ ಪಡೆದುಕೊಳ್ಳಬೇಕು. ಅರ್ಥವಾಗದಿದ್ದರೆ ನಾನು ಜನರಿಗೆ ಮಾರ್ಗದರ್ಶನ ಮಾಡಲು ಸದಾ ಸಿದ್ಧನಿದ್ದೇನೆ ಎಂದು ಹೇಳಿದರು.
ಬೆಂಗಳೂರಿನ ಜಗದ್ಗುರು ವೇದಾಚಾರ್ಯ ಮಂಜುನಾಥ್ ಭಾರತಿ ಸ್ವಾಮೀಜಿ ಮಾತನಾಡಿ, ಮರಾಠಾ ಇದೊಂದು ಕ್ಷತ್ರೀಯ ಸಮಾಜವಾಗಿದ್ದು, ಇದು ಎಲ್ಲರನ್ನೂ ಒಳಗೊಂಡು ಸಮಾನತೆಯಿಂದ ಸಾಗುವ ಸಮಾಜವಾಗಿದೆ. ಎಲ್ಲರೂ ಐಕ್ಯತೆಯಿಂದ ಬದುಕಬೇಕು. ಪರಸ್ಪರ ಪ್ರೀತಿ, ವಿಶ್ವಾಸ ಮತ್ತು ನಂಬಿಕೆಯಿಂದ ಸಮಾಜದ ಏಳ್ಗೆಗೆ ಶ್ರಮಿಸಬೇಕು. ಪ್ರತಿಯೊಬ್ಬರೂ ತಮ್ಮ ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ನೀಡಬೇಕು ಎಂದು ಉಪದೇಶ ಮಾಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ಕ್ಷತ್ರೀಯ ಮರಾಠಾ ಪರಿಷತ್ ಅಧ್ಯಕ್ಷ ದಿಗಂಬರರಾವ್ ಮಾನಕಾರಿ, ಸ್ವಾಗತ ಮತ್ತು ಸತ್ಕಾರ ಸಮಿತಿ ಕಾರ್ಯದರ್ಶಿ ವೆಂಕಟರಾವ್ ಮಾಯಿಂದೆ, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಬಾಬುರಾವ್ ಮಾನಕಾರಿ, ಸಮಾಜದ ಮುಖಂಡರಾದ ಜನಾರ್ಧನ್ ಬಿರಾದಾರ್, ಪಂಚಶೀಲ್ ಪಾಟೀಲ್, ಜನಾರ್ಧನ್ ವಾಘಮಾರೆ, ಪ್ರದೀಪ್ ಬಿರಾದಾರ್, ಪ್ರಮುಖರಾದ ಪ್ರಕಾಶ್ ಪಾಟೀಲ್, ಕಿರಣ್ ಬಿರಾದಾರ್, ತಾತ್ಯಾರಾವ್ ಪಾಟೀಲ್, ರಘುನಾಥ್ ಜಾಧವ್, ಪಾಂಡುರಂಗ್ ಕಣಜಿ, ಮೀನಾಕ್ಷಿ ಕಾಳೆ, ಹಣಮಂತರಾವ್ ಚವ್ಹಾಣ, ಸತೀಶ್ ಪಾಟೀಲ್, ಕಿಶನರಾವ್ ಪಾಟೀಲ್, ಬನಸಿಲಾಲ್ ಬೊರೊಳೆ, ನಾರಾಯಣ ಪಾಟೀಲ್, ವಿದ್ಯಾವಾನ್ ಪಾಟೀಲ್ ಹಾಗೂ ಶಾಹುರಾಜ್ ಪವಾರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.