ಕಠಿಣ ಪರಿಶ್ರಮದಿಂದ ವಿದ್ಯಾರ್ಥಿಗಳು ಯಶಸ್ಸು ಸಾಧಿಸುವುದಕ್ಕೆ ಸಾಧ್ಯ : ಸತೀಶ್ ಎಸ್. ಅಂಬೆಸಂಗೆ

ಬೀದರ್: ಅಧ್ಯಯನವು ಒಂದು ತಪಸ್ಸು ಆಗಿದ್ದು, ಕಠಿಣ ಪರಿಶ್ರಮ ಹಾಗೂ ಶ್ರದ್ಧೆಯಿಂದ ಅಭ್ಯಾಸ ಮಾಡಿದಾಗ ಮಾತ್ರ ವಿದ್ಯಾರ್ಥಿಗಳು ಯಶಸ್ಸು ಸಾಧಿಸುವುದು ಸಾಧ್ಯವಾಗುತ್ತದೆ ಎಂದು ಬೆಂಗಳೂರಿನ ಪ್ರಗ್ಯಾನ್ ಎಐ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸತೀಶ್ ಎಸ್ ಅಂಬೆಸಂಗೆ ಅವರು ಅಭಿಪ್ರಾಯಪಟ್ಟರು.
ನಗರದ ಜಿ ಎನ್ ಡಿ ಕಾಲೇಜಿನ ಎಲೆಕ್ಟ್ರಾನಿಕ್, ಡಾಟಾ ಸೈನ್ಸ್ ವಿಭಾಗ ಆಯೋಜಿಸಿದ್ದ, 5 ದಿನಗಳ ವಿಶೇಷ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿಗಳ ಮುಖ್ಯ ಗುರಿ ಅಧ್ಯಯನ ಹಾಗೂ ಕೌಶಲ್ಯ ವೃದ್ಧಿಸಿಕೊಳ್ಳುವುದಾಗಿರಬೇಕು. ಅವರು ಆ ಕಡೆಗೆ ಹೆಚ್ಚು ಒತ್ತು ನೀಡಬೇಕು. ಅನಾವಶ್ಯಕ ವಿಷಯಗಳಲ್ಲಿ ತಲೆಹಾಕಿ ತಮ್ಮ ಶಕ್ತಿ ಹಾಳು ಮಾಡಿಕೊಳ್ಳಬಾರದು. ಯಾವುದೇ ವಿಷಯವನ್ನು ಸಕಾರಾತ್ಮಕವಾಗಿ ಯೋಚನೆ ಮಾಡುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ತಿಳುವಳಿಕೆ ಹೇಳಿದರು.
ಈ ಸಂದರ್ಭದಲ್ಲಿ ವಿಭಾಗದ ಮುಖ್ಯಸ್ಥ ಡಾ. ಕಿಶನಸಿಂಗ್, ಡಾ. ವೀರೇಂದ್ರ ಡಾಕುಳಗಿ, ಪ್ರೊ. ಕೆ.ಕೆ ಪ್ರಸಾದ್, ಆಡಳಿತಾಧಿಕಾರಿ ಕರ್ನಲ್ ಆರ್.ಡಿ. ಸಿಂಗ್, ಪಶು ವೈದ್ಯಕೀಯ ವಿವಿ ನಿವೃತ್ತ ಅಧಿಕಾರಿ ವೀರಭದ್ರಪ್ಪ ಉಪ್ಪಿನ್, ಡಾ. ಪೂಜಾರ್, ಹಾಗೂ ಡಾ. ಶ್ವೇತಾ ಗಾದಗೆ ಸೇರಿದಂತೆ ಶಿಬಿರದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.