ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ಪ್ರವೇಶ ಪ್ರಾರಂಭ : ಪ್ರೊ.ಶರಣಪ್ಪ ಹಲಸೆ

ಬೀದರ್ : ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ಫೆ.10 ರಿಂದ ಪ್ರವೇಶ ಪ್ರಾರಂಭವಾಗಿದ್ದು, ದ್ವಿ ಪದವಿ ಪಡೆಯಲು ಅವಕಾಶವಿದೆ ಎಂದು ಕುಲಪತಿ ಪ್ರೊ.ಶರಣಪ್ಪ ಹಲಸೆ ಹೇಳಿದರು.
ಇಂದು ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಮುಕ್ತ ವಿಶ್ವವಿದ್ಯಾಲಯವು ಮೂರು ಹಂತದಲ್ಲಿ ಕೆಲಸ ಮಾಡುತ್ತದೆ. ಇದರ ಕೇಂದ್ರ ಕಚೇರಿ ಮೈಸೂರಿನಲ್ಲಿದೆ. ಪ್ರಾದೇಶಿಕ ಕೇಂದ್ರಗಳು ಎಲ್ಲ ಜಿಲ್ಲೆಯಲ್ಲಿ ಇದ್ದಾವೆ. ಹಾಗೆಯೇ 139 ಸ್ಟಡಿ ಸೆಂಟರ್ ಗಳು ಇದೆ. ಪ್ರಸ್ತುತ ಈ ವಿಶ್ವವಿದ್ಯಾಲಯದಲ್ಲಿ ಒಟ್ಟು 86 ಸಾವಿರ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಈ ವಿಶ್ವವಿದ್ಯಾಲಯು ನ್ಯಾಕ್ A+ ಗ್ರೇಡ್ ಹೊಂದಿದೆ. ಇದರಲ್ಲಿ 69 ಕೋರ್ಸ್ ಗಳಿದ್ದು, ಅದರಲ್ಲಿ 10 ಕೋರ್ಸ್ ಗಳು ಆನ್ ಲೈನ್ ಕೋರ್ಸ್ ಗಳಾಗಿವೆ. ಇಲ್ಲಿ ಪಿಎಚ್ಡಿ ಕೂಡ ಮಾಡಬಹುದಾಗಿದೆ. ವಿಶ್ವವಿದ್ಯಾಲಯದಲ್ಲಿ ಕೆ-ಸೆಟ್, ನೆಟ್, ಯು ಪಿ ಎಸ್ ಸಿ, ಕೆ ಪಿ ಎಸ್ ಸಿ, ಎಸ್ ಎಸ್ ಸಿ ಹಾಗೂ ಬ್ಯಾಂಕಿಗ್ ಪರೀಕ್ಷೆಗಳಿಗೆ ಶುಲ್ಕವಿಲ್ಲದೆ ತರಬೇತಿ ನೀಡಲಾಗುತ್ತದೆ. ಹಾಗೆಯೇ ಎಸ್.ಸಿ, ಎಸ್.ಟಿ ಹಾಗೂ ಒಬಿಸಿ ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ಸೌಲಭ್ಯವಿರುತ್ತದೆ ಎಂದು ಹೇಳಿದರು.
ಬಿಪಿಎಲ್ ಕಾರ್ಡ್ ಹೊಂದಿರುವ ಮಹಿಳಾ ವಿದ್ಯಾರ್ಥಿ, ಆಟೋ, ಕ್ಯಾಬ್ ಚಾಲಕರ ಕುಟುಂಬದ ವಿದ್ಯಾರ್ಥಿ, ಕೆ ಎಸ್ ಆರ್ ಟಿ ಸಿ ನೌಕರರಿಗೆ ಹಾಗೂ ಹಾಲಿ ಮತ್ತು ಮಾಜಿ ಸೈನಿಕ ವಿದ್ಯಾರ್ಥಿಗಳಿಗೆ 10 ಪ್ರತಿಶತ ಭೋಧನಾ ಶುಲ್ಕ ವಿನಾಯಿತಿ ಇರುತ್ತದೆ. ತೃತೀಯ ಲಿಂಗಿ ವಿದ್ಯಾರ್ಥಿ, ದೃಷ್ಟಿ ಹೀನ ವಿದ್ಯಾರ್ಥಿ ಹಾಗೂ ಕೋವಿಡ್ ನಿಂದ ಮೃತರಾದ ಮಕ್ಕಳಿಗೆ ಉಚಿತವಾಗಿ ಶಿಕ್ಷಣ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು.
ಈ ವಿಶ್ವವಿದ್ಯಾಲಯದಿಂದ ಕಲಿತ ವಿದ್ಯಾರ್ಥಿಗಳು ಅನ್ಯ ರಾಜ್ಯಗಳಲ್ಲಿ ಜಿಲ್ಲಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ. ಹಾಗೆಯೇ ನಮ್ಮ ಪ್ರಾಥಮಿಕ ಶಾಲಾ ಶಿಕ್ಷಕರೊಬ್ಬರು ನಮ್ಮ ವಿಶ್ವವಿದ್ಯಾಲಯದಿಂದ ಪದವಿ ಪಡೆದು ಇವಾಗ ಮೈಸೂರಿನಲ್ಲಿ ಅಪರ್ ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದರು.
ನಮ್ಮ ಕಲ್ಯಾಣ ಕರ್ನಾಟಕದ ವಿದ್ಯಾರ್ಥಿಗಳು ತುಂಬಾ ಬುದ್ದಿವಂತರಾಗಿರುತ್ತಾರೆ ಆದರೆ ಅವರನ್ನು ಪ್ರೋತ್ಸಾಹಿಸುವ ಕೆಲಸ ಮಾಡಬೇಕಿದೆ. ಹಾಗಾಗಿ ವಿದ್ಯಾರ್ಥಿಗಳು ಈ ವಿಶ್ವವಿದ್ಯಾಲಯದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಪ್ರಾದೇಶಿಕ ನಿರ್ದೇಶಕ ನಾಗೇಶ್ ಎಂ. ಉಪಸ್ಥಿತರಿದ್ದರು.