ಬೀದರ್ | ಬಸವಣ್ಣರನ್ನು ಸಾಂಸ್ಕೃತಿಕ ನಾಯಕರಾಗಿ ಮಾಡಿದಂತೆ ಅಂಬೇಡ್ಕರ್ ಜಯಂತಿಯನ್ನು ಸಂವಿಧಾನದ ಉತ್ಸವವಾಗಿ ಮಾಡಬೇಕು : ನಿಜಗುಣಾನಂದ ಸ್ವಾಮೀಜಿ

ಬೀದರ್ : ಬಸವಣ್ಣರನ್ನು ಸಾಂಸ್ಕೃತಿಕ ನಾಯಕನೆಂದು ಮಾಡಿದಂತೆ ಸರ್ಕಾರದಿಂದ ಅಂಬೇಡ್ಕರ್ ಜಯಂತಿಯನ್ನು ಸಂವಿಧಾನದ ಉತ್ಸವವಾಗಿ ಆಚರಣೆ ಮಾಡಬೇಕು ಎಂದು ಬೈಲೂರಿನ ತೊಂಟದಾರ್ಯ ಮಠದ ಶ್ರೀ ನಿಜಗುಣಾನಂದ ಸ್ವಾಮೀಜಿ ಹೇಳಿದರು.
ಸೋಮವಾರ ಸಂಜೆ ನಗರದ ಅಂಬೇಡ್ಕರ್ ವೃತ್ತದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ನಗರಸಭೆ ಹಾಗೂ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಜರುಗಿದ ʼಅಂಬೇಡ್ಕರ್ ಜಯಂತಿʼಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮೇಲ್ವರ್ಗದವರು ಸಂವಿಧಾನ ಹಾಗೂ ಕಾನೂನಿಗೆ ಹೆದರಿ ದಲಿತರನ್ನು ತಮ್ಮವರು ಎಂದು ಹೇಳುತ್ತಿದ್ದಾರೆ. ಆದರೆ ಅವರು ತಮ್ಮ ಹೃದಯದಿಂದ ದಲಿತ ವರ್ಗದವರನ್ನು ತಮ್ಮವರೆಂದು ಒಪ್ಪಿಕೊಳ್ಳುತ್ತಿಲ್ಲ. ಹಾಗೆ ಒಪ್ಪಿಕೊಳ್ಳುವ ಕಾಲ ಇನ್ನು ಬಂದಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.
ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಅವರು ಮಾತನಾಡಿ, ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಭಾರತ ದೇಶಕ್ಕೆ ಸರ್ವಶ್ರೇಷ್ಠ ಸಂವಿಧಾನವನ್ನು ನೀಡಿದ್ದಾರೆ. ನಮ್ಮ ದೇಶಕ್ಕೆ ಅವರ ಕೊಡುಗೆ ಅಪಾರವಾಗಿದೆ. ಅವರ ವಿಚಾರಗಳು ನಾವೆಲ್ಲರೂ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದು ತುಂಬಾ ಮುಖ್ಯವಾಗಿದೆ ಎಂದು ಹೇಳಿದರು.
ಪೌರಾಡಳಿತ ಹಾಗೂ ಹಜ್ ಸಚಿವ ರಹೀಮ್ ಖಾನ್ ಅವರು ಮಾತನಾಡಿ, ಅಂಬೇಡ್ಕರ್ ಅವರು ನಮಗೆಲ್ಲ ಸಮಾನತೆಯಿಂದ ಬದುಕಲು ಸಂವಿಧಾನ ನೀಡಿದ್ದಾರೆ. ಇಂದಿನ ಕಾಲದಲ್ಲಿ ಆಹಾರಕ್ಕೂ ಕೂಡ ಕಡಿವಾಣ ಹಾಕುವ ಕೆಲಸ ನಡೆಯುತ್ತಿದೆ. ಬಡವರು ತಿನ್ನುವ ಮಾಂಸಹಾರದ ಮೇಲೆ ದಾಳಿಯಾಗುತ್ತಿದೆ. ಯಾವುದೇ ಒಂದು ಸಮಾಜದ ವ್ಯಕ್ತಿಗೆ ರಕ್ತದ ಅವಶ್ಯಕತೆ ಇದ್ದಾಗ ಆತನಿಗೆ ಮಾಂಸಹಾರ, ಸಸ್ಯಾಹಾರ, ಜಾತಿ, ಧರ್ಮ ಬೇಕಾಗಿರಲ್ಲ. ಹಾಗಾಗಿ ನಾವೆಲ್ಲರೂ ಜಾತಿ, ಧರ್ಮ, ಆಹಾರದಲ್ಲಿ ಮೇಲು ಕೀಳು ಕಾಣದೆ ಸಮಾನತೆಯಿಂದ ಬದುಕಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಭಂತೆ ಜ್ಞಾನಸಾಗರ್, ಶಾಸಕ ಶೈಲೆಂದ್ರ ಬೆಲ್ದಾಳೆ, ನಗರ ಸಭೆ ಅಧ್ಯಕ್ಷ ಮಹಮ್ಮದ್ ಗೌಸ್, ಶಾಹೀನ್ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಅಬ್ದುಲ್ ಖದಿರ್, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಗಿರೀಶ್ ಬದೋಲೆ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಸಿಂಧು ರಘು ಹೆಚ್. ಎಸ್, ಮುಖಂಡರಾದ ಮಾರುತಿ ಬೌದ್ಧೆ, ಅನೀಲ್ ಬೆಲ್ದಾರ್, ಪಂಡಿತರಾವ್ ಚಿದ್ರಿ ಹಾಗೂ ವಿಜಯಕುಮಾರ್ ಸೊನಾರೆ ಸೇರಿದಂತೆ ಸಮಾಜದ ಸಾವಿರಾರು ಜನರು ಉಪಸ್ಥಿತರಿದ್ದರು.