ಹಕ್ಕಿಜ್ವರ ಹಿನ್ನಲೆ | ಕೋಳಿ ಫಾರ್ಮ್ ಮಾಲಕರು ಕಟ್ಟುನಿಟ್ಟಿನ ಸೂಚನೆ ಪಾಲಿಸಿ : ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ

ಬೀದರ್ : ಜಿಲ್ಲೆಯಲ್ಲಿ ಈವರೆಗೆ ಯಾವುದೇ ರೀತಿಯ ಹಕ್ಕಿಜ್ವರ ಪ್ರಕರಣಗಳು ಕಂಡು ಬಂದಿಲ್ಲ. ಕೋಳಿ ಫಾರ್ಮ್ ಮಾಲಕರು ಕಟ್ಟುನಿಟ್ಟಿನ ಸೂಚನೆ ಪಾಲಿಸುವಂತೆ ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ತಿಳಿಸಿದರು.
ಇಂದು ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಆರೋಗ್ಯ ಇಲಾಖೆಯ ಕಾರ್ಯಕ್ರಮಗಳ ಪರಿಶೀಲನೆ ಸಭೆಯಲ್ಲಿ ಅವರು ಮಾತನಾಡುತ್ತಾ, ಮಹಾರಾಷ್ಟ್ರದಲ್ಲಿ ಹಕ್ಕಿಜ್ವರ ದೃಢಪಟ್ಟಿರುವ ಹಿನ್ನೆಲೆ ಜಿಲ್ಲೆಯ ಗಡಿಭಾಗಗಳಲ್ಲಿ 9 ಚೆಕ್‌ಪೋಸ್ಟ್ ಹಾಗೂ ಮಾ.3 ರಿಂದ ತೆಲಂಗಾಣ ಗಡಿಯಲ್ಲಿ 4 ಚೆಕ್‌ಪೋಸ್ಟ್ ಸೇರಿ ಒಟ್ಟು 13 ಚೆಕ್‌ಪೋಸ್ಟ್ ಗಳನ್ನು ತೆರೆಯಲಾಗಿದೆ. ಅಧಿಕಾರಿ, ಸಿಬ್ಬಂದಿ ಅಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ಅವರು ಹೇಳಿದರು.
ಎಲ್ಲಾದರೂ ಹಠತ್ತಾಗಿ ಕೋಳಿಗಳು ಸಾವನ್ನಪಿದ್ದರೆ ತಕ್ಷಣವೇ ಗಮನಕ್ಕೆ ತರುವಂತೆ ತಿಳಿಸಲಾಗಿದೆ. ಮಹಾರಾಷ್ಟ್ರದಿಂದ ಕೋಳಿ, ಮೊಟ್ಟೆ ಸಾಗಾಟವಾಗದಂತೆ ಚೆಕ್‌ಪೋಸ್ಟ್ ಗಳಲ್ಲಿ ಚೆಕ್ ಮಾಡಬೇಕು ಎಂದು ಪಶುಪಾಲನಾ ಮತ್ತು ಪಶು ವೈದ್ಯಕೀಯ ಇಲಾಖೆ ಅದಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಜಿಲ್ಲೆಯಲ್ಲಿ ಮಾಂಸಾಹಾರ ಪ್ರಿಯರು ಮಾಂಸ ಹಾಗೂ ಮೊಟ್ಟೆಗಳು ಹೆಚ್ಚಾಗಿ ಬೇಯಿಸಿ ತಿನ್ನಬೇಕು. ಸಧ್ಯ ಸಾರ್ವಜನಿಕರು ಭಯಪಡುವ ಅಗತ್ಯವಿಲ್ಲ. ಆದರೆ ಎಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಎಚ್ಚರಿಸಿದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಅಧಿಕಾರಿ ಡಾ.ಜ್ಞಾನೇಶ್ವರ್ ನಿರಗುಡೆ ಮಾತನಾಡಿ, ಆಯುಷ್ಮಾನ ಭಾರತ ಆರೋಗ್ಯ ಕರ್ನಾಟಕ ಯೋಜನೆಯಡಿ 5 ಲಕ್ಷ ರೂ. ವರೆಗೆ ಉಚಿತ ಚಿಕಿತ್ಸೆ ನಿಯಮವಿದ್ದರೂ ಕೂಡ ಕೆಲ ಆಸ್ಪತ್ರೆಗಳು ರೋಗಿಗಳಿಂದ ಹಣ ಪಡೆಯುತ್ತಿವೆ ಎಂದು ಜಿಲ್ಲಾದಿಕಾರಿ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಪಡೆದ ಹಣವನ್ನು ಆಸ್ಪತ್ರೆಗಳಿಂದ ಮರಳಿ ರೋಗಿಗಳಿಗೆ ಸಂದಾಯ ಮಾಡುವಂತೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಆರೋಗ್ಯ ಇಲಾಖೆ ಅಧಿಕಾರಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.