ಕುಸಿಯುವ ಭೀತಿಯಲ್ಲಿ ಭಾಲ್ಕಿ ಕೋಟೆ: ಆತಂಕದಲ್ಲಿ ಸಾರ್ವಜನಿಕರು

ಬೀದರ್: ಭಾಲ್ಕಿ ನಗರದಲ್ಲಿರುವ ಐತಿಹಾಸಿಕ ಕೋಟೆಯು ಜೀರ್ಣಾವಸ್ಥೆಯಲ್ಲಿದ್ದು, ಸಂಪೂರ್ಣವಾಗಿ ಕುಸಿಯುವ ಭೀತಿ ಎದುರಾಗಿದೆ. ಈ ಕೋಟೆಯ ಪಕ್ಕದಲ್ಲೇ ಹಾದು ಹೋಗುವ ರಸ್ತೆಯ ಮೇಲೆ ದಿನಾಲೂ ನೂರಾರು ಜನರು ಓಡಾಡುತ್ತಿರುತ್ತಾರೆ. ಹಾಗಾಗಿ ಕೋಟೆ ಕುಸಿದು ಬಿದ್ದರೆ ಭಾರೀ ಅನಾಹುತ ಸಂಭವಿಸಬಹುದು ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಭಾಲ್ಕಿಯ ಹಳೇ ನಗರ ಪ್ರದೇಶದ ಹತ್ತಿರ ಈ ಐತಿಹಾಸಿಕ ಕೋಟೆ ಇದೆ. ಕೋಟೆಯ ಕೆಲವು ಭಾಗಗಳಲ್ಲಿ ಈಗಾಗಲೇ ಗೋಡೆಯು ಕುಸಿದಿದ್ದು, ಮಳೆಗಾಲದಲ್ಲಿ ನೀರಿನಿಂದ ಕೋಟೆಯ ಗೋಡೆಯು ತೇವವಾಗಿ ಬೀಳುವ ಆತಂಕ ಎದುರಾಗಿದೆ. ಕೋಟೆಯ ಮೇಲೆಲ್ಲ ಹುಲ್ಲು, ಗಿಡ ಬೆಳೆದಿದ್ದರಿಂದ ಗೋಡೆಯು ಸಂಪೂರ್ಣವಾಗಿ ಬಿರುಕು ಬಿಟ್ಟಿದೆ. ಕೋಟೆಯ ಒಳಗಡೆ ಹುಲ್ಲು, ಮುಳ್ಳಿನ ಗಿಡ, ಮರ ಬೆಳೆದು ಅದು ಸಾರ್ವಜನಿಕರು ಬಹಿರ್ದೆಸೆಗೆ ಹೋಗುವ ಜಾಗವಾಗಿ ಮಾರ್ಪಟ್ಟಿದೆ. ಪಕ್ಕದಲ್ಲಿರುವ ಗಲ್ಲಿಯ ಗಲೀಜು ನೀರು ಕೋಟೆಯ ಒಳಗಡೆ ಜಮೆಯಾಗಿ ಗಬ್ಬೆಂದು ನಾರುತ್ತಿದೆ.
ಕೋಟೆಯ ಒಳಗಡೆ ಕೆಲ ಚೆನ್ನಾಗಿರುವ ಕೋಣೆಗಳಲ್ಲಿ ಸತ್ಯನಿಕೇತನ ಶಾಲೆಯೊಂದು ನಡೆಯುತ್ತಿದೆ. ವಿದ್ಯಾರ್ಥಿಗಳು ಆ ಕೋಟೆಯಲ್ಲಿರುವ ಶಾಲೆಯಲ್ಲಿ ಪಾಠ ಕಲಿಯುತ್ತಾರೆ. ಆ ಕೋಣೆಗಳು ಕೂಡ ಬೀಳುವ ಹಂತಕ್ಕೆ ತಲುಪಿವೆ. ಆದರೂ ಆ ಶಾಲೆ ಅದೇ ಜಾಗದಲ್ಲಿ ಮುಂದುವರೆದಿದೆ. ಕೋಟೆಯ ಒಳಭಾಗದಲ್ಲಿ ಒಂದು ಮಸೀದಿ ಇದ್ದು, ಕೋಟೆಯ ಪ್ರವೇಶ ದ್ವಾರದಲ್ಲಿ ಒಂದು ಮಂದಿರವಿದೆ. ಮಸೀದಿಯಲ್ಲಿ ಚಿಕ್ಕ ಮಕ್ಕಳು ಸೇರಿ ದೊಡ್ಡವರು ಪ್ರಾರ್ಥನೆಗೋಸ್ಕರ ಬರುತ್ತಾರೆ. ಮಂದಿರದಲ್ಲಿಯೂ ಕೂಡ ಪೂಜೆಗೋಸ್ಕರ ಜನ ಬರುತ್ತಿರುತ್ತಾರೆ. ಇಷ್ಟೆಲ್ಲ ಜನ ಜಂಗೂಳಿ ಇರುವ ಪ್ರದೇಶದಲ್ಲಿರುವ ಈ ಕೋಟೆ ಬೀಳುವ ಹಂತಕ್ಕೆ ತಲುಪಿ ದೊಡ್ಡ ಅನಾಹುತಕ್ಕೋಸ್ಕರ ಬಾಯಿ ತೆರೆದು ನಿಂತಿದೆ.
ಕಳೆದ ಬಾರಿಯ ಮಳೆಗಾಲದಲ್ಲಿ ಕೋಟೆಯ ಗೋಡೆಯ ಕೆಲ ಭಾಗ ಬಿದ್ದಿದೆ. ಮುಂದಿನ ಮಳೆಗಾಲದಲ್ಲಿ ಕೋಟೆ ಕುಸಿದು ರಸ್ತೆಯಲ್ಲಿ ಓಡಾಡುವವರ ಮೇಲೆ ಬಿದ್ದು ಸಾವು ನೋವುಗಳು ಸಂಭವಿಸಿದರು ಆಶ್ಚರ್ಯವಿಲ್ಲ. ಕೋಟೆಯ ಕೆಲವೊಂದು ಭಾಗದಲ್ಲಿ ದುರುಸ್ತಿ ಕಾರ್ಯ ನಡೆದಿದೆ. ಆದರೆ ಹೊರಗಡೆಯಿಂದ ಬಿದ್ದ ಗೋಡೆಗೆ ಯಾವುದೇ ರೀತಿಯ ದುರುಸ್ತಿ ಕಾರ್ಯವಾಗಲಿ ರಸ್ತೆ ಮೇಲೆ ಓಡಾಡುವವರ ಸುರಕ್ಷೆತೆಗೋಸ್ಕರ ಯಾವುದೇ ಕ್ರಮ ಕೈಗೊಂಡಿಲ್ಲ. ಇದು ತುಂಬಾ ಅಪಾಯಕಾರಿಯಾಗಿದೆ ಎಂದು ಸಾರ್ವಜನಿಕರ ಆರೋಪವಾಗಿದೆ.
ಭಾಲ್ಕಿ ಕೋಟೆ ಇನ್ನು ರಾಜ್ಯ ಸಂರಕ್ಷಿತ ಸ್ಮಾರಕ ಎಂದು ಘೋಷಣೆಯಾಗಿಲ್ಲ. ಟೂರಿಸಂ ಯಿಂದ ಸ್ವಲ್ಪ ಬಜೆಟ್ ಬಂದಿತ್ತು. ಈ ಬಜೆಟ್ನಲ್ಲಿ ಕೋಟೆಯ ಒಳಗಡೆಯಲ್ಲಿ ಸ್ವಲ್ಪ ದುರಸ್ತಿ ಕೆಲಸ ಮಾಡಿದ್ದೇವೆ. ಈಗಾಗಲೇ ತಹಶೀಲ್ದಾರ್ ಅವರಿಗೆ ಇದರ ಬಗ್ಗೆ ವಿವರಣೆ ನೀಡಲು ಪತ್ರ ಬರೆದಿದ್ದೇವೆ. ಅವರು ವಿವರಣೆ ನೀಡಿದರೆ ಅದನ್ನು ಸರಕಾರಕ್ಕೆ ಕಳುಹಿಸುತ್ತೇವೆ. ಸರಕಾರದಿಂದ ಸಂರಕ್ಷಿತ ಸ್ಮಾರಕ ಎಂದು ಘೋಷಣೆಯಾಗಬೇಕು.
-ಮಂಜುಳಾ, ಉಪ ನಿರ್ದೇಶಕಿ, ರಾಜ್ಯ ಪುರಾತತ್ವ ಇಲಾಖೆ
ಭಾಲ್ಕಿ ಕೋಟೆಯು ಕಿಡಿಗೇಡಿಗಳ ಅನೈತಿಕ ತಾಣವಾಗಿದೆ. ಬೀದರ್ ಕೋಟೆಯಂತೆ ಈ ಕೋಟೆಯೂ ಅಭಿವೃದ್ಧಿಪಡಿಸಿದರೆ ಅನುಕೂಲವಾಗುತ್ತದೆ. ಕೋಟೆಯ ಒಳಗಡೆ ಖಾಲಿ ಸ್ಥಳದಲ್ಲಿ ಉದ್ಯಾನವನ ನಿರ್ಮಿಸಿದರೆ ಉತ್ತಮವಾಗುತ್ತದೆ. ಆದರೆ ಅಧಿಕಾರಿಗಳ ನಿರ್ಲಕ್ಷದಿಂದ ಅದು ಪಾಳು ಬಿದ್ದಿದೆ.
-ಪ್ರವೀಣ್ ಮೋರೆ, ಭಾಲ್ಕಿಯ ನಿವಾಸಿ
ಕೋಟೆಯ ಹೊರ ಭಾಗದ ದೊಡ್ಡ ಗೊಡೆಗಳು ಬೀಳುವ ಸಂಭವವಿದೆ. ಇದರ ಪಕ್ಕದಲ್ಲಿರುವ ರಸ್ತೆಯಿಂದ ದಿನನಿತ್ಯ ಸಾವಿರಾರು ಜನರು ಓಡಾಡುತ್ತಾರೆ. ಇಲ್ಲಿಂದ ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ಹೊಗುತ್ತಾರೆ. ಹೀಗಾಗಿ ಕೋಟೆಯ ಗೊಡೆಗಳು ಬಿದ್ದು ಅಹಿತಕರ ಘಟನೆ ಸಂಭವಿಸಬಹುದು. ಸಾರ್ವಜನಿಕರ ಹಿತದೃಷ್ಟಿಯಿಂದ ಮುನ್ನೆಚ್ಚರಿಕಾ ಕ್ರಮವಹಿಸಿ ಸಂಬಂಧಪಟ್ಟ ಅಧಿಕಾರಿ ಹಾಗೂ ರಾಜಕಾರಣಿಗಳು ಕೋಟೆ ಗೋಡೆಯ ದುರುಸ್ತಿ ಕೆಲಸ ಮಾಡಬೇಕು.
-ವಿಶಾಲ್ ಬಂಧು, ಸ್ಥಳೀಯ ನಿವಾಸಿ