ಬೀದರ್ | ಬಾಲಕಿಯ ಹತ್ಯೆ ಪ್ರಕರಣ : ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಲು ಒತ್ತಾಯಿಸಿ ಪ್ರತಿಭಟನಾ ಮೆರವಣಿಗೆ
ಬೀದರ್ : ಬಸವಕಲ್ಯಾಣ ತಾಲೂಕಿನ ಗಾಂಧಿ ವೃತ್ತದಿಂದ ತ್ರಿಪುರಾಂತನ ವಾಲ್ಮೀಕಿ ವೃತ್ತದವರೆಗೆ ಬಾಲಕಿಯ ಭೀಕರ ಹತ್ಯೆಯನ್ನು ಖಂಡಿಸಿ, ಹತ್ಯೆಗೈದ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಬೇಕಾಗಿ ಆಗ್ರಹಿಸಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಿತು.
ಬಸವಕಲ್ಯಾಣ ತಾಲೂಕಿನ ಗುಣತೀರ್ಥವಾಡಿ ಗ್ರಾಮದ ಕೂಲಿ ಕಾರ್ಮಿಕರ ಕುಟುಂಬಕ್ಕೆ ಸೇರಿದ ಬಾಲಕಿಯು, ಆ.29ರಂದು ರಾತ್ರಿ ಮನೆಯಿಂದ ಹೊರಗೆ ಹೋದ ಬಳಿಕ ನಾಪತ್ತೆಯಾಗಿದ್ದರು. ಹೆತ್ತವರು ಹುಡುಕಾಟ ನಡೆಸಿ ಪತ್ತೆಯಾಗದಿದ್ದಾಗ, ಎರಡು ದಿನಗಳಾದ ಬಳಿಕ ಬಸವಕಲ್ಯಾಣ ನಗರ ಪೊಲೀಸ್ ಠಾಣೆಯಲ್ಲಿ ಆ.31ರಂದು ನಾಪತ್ತೆ ಪ್ರಕರಣ ದಾಖಲಿಸಿದ್ದರು.
ಬಸವಕಲ್ಯಾಣ ಪೊಲೀಸರು ನಾಪತ್ತೆಯಾಗಿದ್ದ ಬಾಲಕಿಯ ಪತ್ತೆಗಾಗಿ ಹುಡುಕಾಟ ನಡೆಸಿದರು. 4 ದಿನಗಳ ಬಳಿಕ, ಸೆ.1ರಂದು ಗುಣತೀರ್ಥವಾಡಿ ಗ್ರಾಮದ ಹೊರವಲಯದಲ್ಲಿ ಬಾಲಕಿಯ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಭೀಕರವಾಗಿ ಕೊಲೆ ಮಾಡಿ ಗುಣತೀರ್ಥವಾಡಿ ಗ್ರಾಮದ ಸರ್ಕಾರಿ ಶಾಲೆಯ ಪಕ್ಕದಲ್ಲಿರುವ ಮುಳ್ಳು ಕಂಟಿಯಲ್ಲಿ ಎಸೆದು ಹೋಗಿದ್ದು, ಬಾಲಕಿಯ ಮೃತದೇಹ ಬಹುತೇಕ ವಿವಸ್ತ್ರವಾಗಿದ್ದು, ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಅತ್ಯಾಚಾರವೆಸಗಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಘಟನೆಯನ್ನು ಖಂಡಿಸಿ, ಟೋಕರೆ ಕೋಳಿ ಸಮಾಜ ಹಾಗೂ ವಿವಿಧ ಸಂಘಟನೆಯಿಂದ ಗಾಂಧಿ ವೃತ್ತದಿಂದ ಅಂಬೇಡ್ಕರ್ ವೃತ್ತದ ಮಾರ್ಗವಾಗಿ ವಾಲ್ಮೀಕಿ ವೃತ್ತದ ವರೆಗೆ ಜರುಗಿದ್ದ ಮೆರವಣಿಗೆಯಲ್ಲಿ ಸಾವಿರಾರು ಜನರು ಪಾಲ್ಗೊಂಡಿದ್ದರು. ಬಾಲಕಿಯನ್ನು ಅಪಹರಿಸಿ ಹತ್ಯೆಗೈದ ಆರೋಪಿಯನ್ನು ಎನ್ ಕೌಂಟರ್ ಮಾಡಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವರಿಗೆ ಮನವಿ ಪತ್ರ ನೀಡಿ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಮುಖಂಡ ಹಣಮಂತ ಬೊಕ್ಕೆ, ರಾಮಣ್ಣ ಮಂಠಾಳೆ, ಶ್ರೀನಿವಾಸ್ ರೆಡ್ಡಿ, ರೇಖಾ ರಾಜಕುಮಾರ್, ಮಲ್ಲಿಕಾರ್ಜುನ್ ಬೊಕ್ಕೆ, ಪೋಪಟ್ ಜಮಾದಾರ್, ಶಂಕರ್ ಜಮಾದಾರ್, ಆಕಾಶ್ ಖಂಡಾಳೆ, ರವಿ ಕೊಳಕೂರ್, ಪಿಂಟು ಕಾಂಬಳೆ, ಯುವರಾಜ್ ಬೆಂಡೆ, ಪ್ರಕಾಶ ನಾಗುರೆ, ಸೇರಿದಂತೆ ಪ್ರಮುಖರು ಹಾಜರಿದ್ದರು.