ಶಾಹಿನ್ ಶಿಕ್ಷಣ ಸಂಸ್ಥೆಯಿಂದ ಕನ್ನಡ, ಉರ್ದು ಮಾಧ್ಯಮದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಜಾರಿಗೆ ನಿರ್ಧಾರ : ಡಾ.ಅಬ್ದುಲ್ ಖಾದೀರ್

ಡಾ.ಅಬ್ದುಲ್ ಖಾದೀರ್
ಬೀದರ್ : ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹವು ಕಲ್ಯಾಣ ಕರ್ನಾಟಕ ಭಾಗದ ಸರ್ಕಾರಿ ಕನ್ನಡ ಹಾಗೂ ಉರ್ದು ಮಾಧ್ಯಮದ ವಿದ್ಯಾರ್ಥಿಗಳಿಗೆ ಪ್ರಸಕ್ತ ಶೈಕ್ಷಣಿಕ ವರ್ಷದಿಂದ 'ಶಾಹೀನ್ ಕಲ್ಯಾಣ ಕರ್ನಾಟಕ ವಿದ್ಯಾರ್ಥಿ ವೇತನ' ಯೋಜನೆಯನ್ನು ಜಾರಿಗೊಳಿಸಲು ನಿರ್ಧರಿಸಿದೆ ಎಂದು ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷ ಡಾ.ಅಬ್ದುಲ್ ಖಾದೀರ್ ಅವರು ತಿಳಿಸಿದ್ದಾರೆ.
ಈ ವರ್ಷ ಸಮೂಹದ ಕಲ್ಯಾಣ ಕರ್ನಾಟಕ ಭಾಗದ ಒಂಬತ್ತು ಪದವಿಪೂರ್ವ ವಿಜ್ಞಾನ ಕಾಲೇಜುಗಳಲ್ಲಿ ಪ್ರವೇಶ ಪಡೆಯುವ ಒಟ್ಟು 250 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಗುವುದು ಎಂದು ಅವರು ಹೇಳಿದ್ದಾರೆ.
ಬೀದರ್ ನ ಮುಖ್ಯ ಶಾಖೆಯಲ್ಲಿ 75, ಕಲಬುರಗಿ ಶಾಖೆಯಲ್ಲಿ 35, ರಾಯಚೂರು, ಬಳ್ಳಾರಿ, ಯಾದಗಿರಿ, ಔರಾದ್, ಬಸವಕಲ್ಯಾಣ, ಚಿಟಗುಪ್ಪ ಹಾಗೂ ಹುಮನಾಬಾದ್ ಶಾಖೆಗಳಲ್ಲಿ ತಲಾ 20 ವಿದ್ಯಾರ್ಥಿಗಳಿಗೆ ಶಿಷ್ಯವೇತನ ನೀಡಲಾಗುವುದು ಎಂದಿದ್ದಾರೆ.
ಎಸೆಸೆಲ್ಸಿಯಲ್ಲಿ ಶೇ.90ಕ್ಕೂ ಅಧಿಕ ಅಂಕಗಳಿಸಿದ ಕಲ್ಯಾಣ ಕರ್ನಾಟಕ ಭಾಗದ ಸರ್ಕಾರಿ ಕನ್ನಡ ಹಾಗೂ ಉರ್ದು ಮಾಧ್ಯಮದ ವಿದ್ಯಾರ್ಥಿಗಳು ಶಿಷ್ಯವೇತನಕ್ಕೆ ಸಮೂಹದ ಆಯಾ ಶಾಖೆಗಳಲ್ಲಿ ಅಥವಾ ಆನ್ಲೈನ್ನಲ್ಲಿ (www.shaheengroup.org) ಮೇ 15 ರ ಒಳಗಾಗಿ ಅರ್ಜಿ ಸಲ್ಲಿಸಬಹುದು ಎಂದು ಅವರು ಮಾಹಿತಿ ನೀಡಿದ್ದಾರೆ.
ಮೇ 18 ರಂದು ಆಯಾ ಶಾಖೆಗಳಲ್ಲಿ ಸಂದರ್ಶನ ನಡೆಯಲಿದೆ. ಅರ್ಹತೆ ಆಧಾರದಲ್ಲಿ ಆಯ್ಕೆ ಜರುಗಲಿದೆ. ಗ್ರಾಮೀಣ ಭಾಗದ, ಅಂಗವಿಕಲ ಹಾಗೂ ಅನಾಥ ಮಕ್ಕಳಿಗೆ ವಿಶೇಷ ಆದ್ಯತೆ ಕೊಡಲಾಗುವುದು. ಆಯ್ಕೆಯಾಗುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ರೂಪದಲ್ಲಿ ಕಾಲೇಜು ಶುಲ್ಕದಲ್ಲಿ ಶೇ.75 ರಷ್ಟು ರಿಯಾಯಿತಿ ಸಿಗಲಿದೆ ಎಂದು ಅವರು ಹೇಳಿದ್ದಾರೆ.
ಶಾಹೀನ್ ಕಾಲೇಜಿನ 2024-25ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಕನ್ನಡ ಮಾಧ್ಯಮ ವಿದ್ಯಾರ್ಥಿಗಳ ತೇರ್ಗಡೆ ಹಾಗೂ ಸಾಧನೆ ಪ್ರಮಾಣ ಆಂಗ್ಲ ಮಾಧ್ಯಮ ವಿದ್ಯಾರ್ಥಿಗಳಿಗಿಂತ ಶೇ.13 ರಷ್ಟು ಹೆಚ್ಚಿದೆ. ಉರ್ದು ಮಾಧ್ಯಮ ವಿದ್ಯಾರ್ಥಿಗಳು ಮೂರನೇ ಸ್ಥಾನದಲ್ಲಿದ್ದಾರೆ. ಇತರ ವಿದ್ಯಾರ್ಥಿಗಳಿಗಿಂತ ಹಾಸ್ಟೆಲ್ ವಿದ್ಯಾರ್ಥಿಗಳ ಸಾಧನೆ ಹೆಚ್ಚಿದೆ ಎಂದು ಎಂದು ಅವರು ಹರ್ಷ ವ್ಯಕ್ತಪಡಿಸಿದ್ದಾರೆ.
ಕಲ್ಯಾಣ ಕರ್ನಾಟಕ ಭಾಗದ ಸರ್ಕಾರಿ ಕನ್ನಡ ಹಾಗೂ ಉರ್ದು ಮಾಧ್ಯಮದ ವಿದ್ಯಾರ್ಥಿಗಳನ್ನು ಸಾಧನೆಗೆ ಪ್ರೇರೇಪಿಸಲು ವಿದ್ಯಾರ್ಥಿ ವೇತನ ಯೋಜನೆ ರೂಪಿಸಲಾಗಿದೆ. ಗ್ರಾಮೀಣ ಭಾಗದಲ್ಲಿ ಇನ್ನಷ್ಟು ಶೈಕ್ಷಣಿಕ ಜಾಗೃತಿ ಮೂಡಬೇಕಿದೆ. ಔರಾದ್ ತಾಲ್ಲೂಕಿನ ತೋರಣಾ ಗ್ರಾಮದ ಕೆಲ ಮಕ್ಕಳು ಸರ್ಕಾರಿ ವೈದ್ಯಕೀಯ ಸೀಟು ಪಡೆದಿದ್ದರಿಂದ ಆ ಊರಲ್ಲಿ ಶೈಕ್ಷಣಿಕ ಜಾಗೃತಿ ಮೂಡಿದ್ದು, ಇದೀಗ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿವಿಧ ವೃತ್ತಿಪರ ಕೋರ್ಸ್ಗಳಲ್ಲಿ ಪ್ರವೇಶ ಪಡೆದಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಸಾವಿರಾರು ವಿದ್ಯಾರ್ಥಿಗಳ ವೈದ್ಯಕೀಯ ಕೋರ್ಸ್ ಕನಸು ನನಸಾಗಿಸಿದ ಹೆಮ್ಮೆ ನಮ್ಮ ಶಾಹೀನ್ ಸಂಸ್ಥೆಗೆ ಇದೆ. ಶಾಹೀನ್ನಲ್ಲಿ ಓದಿದ 100 ಕುಟುಂಬಗಳ ಇಬ್ಬರು, ಮೂವರು ಮಕ್ಕಳು ವೈದ್ಯರಾದ ಉದಾಹರಣೆಗಳು ಇವೆ. ಕಲ್ಯಾಣ ಕರ್ನಾಟಕ ಭಾಗದ ವಿದ್ಯಾರ್ಥಿಗಳು ಈ ಶಿಷ್ಯವೇತನದ ಲಾಭ ಪಡೆಯಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಶಿಷ್ಯವೇತನದ ಕುರಿತು ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9964763018 (ಬೀದರ್ ಮುಖ್ಯ ಕಚೇರಿ), 7666048172 (ಕಲಬುರಗಿ ಶಾಖೆ), 9916149428 (ಔರಾದ್), 9845058018 (ಬಸವಕಲ್ಯಾಣ), 8971222784 (ಚಿಟಗುಪ್ಪ), 7026951056 (ಹುಮನಾಬಾದ್), 9880539999 (ರಾಯಚೂರು), 9986670286 (ಯಾದಗಿರಿ) ಹಾಗೂ 8553165562 (ಬಳ್ಳಾರಿ) ಶಾಖೆಗಳಿಗೆ ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.