ಬೀದರ್ | ಪದವಿಪೂರ್ವ ವಿದ್ಯಾರ್ಥಿಗಳ ಗುಣಮಟ್ಟದ ಕಲಿಕೆ, ಫಲಿತಾಂಶಕ್ಕಾಗಿ ʼಒಂದು ದಿನದ ಕಾರ್ಯಾಗಾರʼ
ಬೀದರ್ : ಪದವಿಪೂರ್ವ ವಿದ್ಯಾರ್ಥಿಗಳ ಗುಣಮಟ್ಟದ ಕಲಿಕೆ, ಉತ್ತಮ ಫಲಿತಾಂಶಕ್ಕಾಗಿ ನಗರದ ಶ್ರೀ ಸ್ವಾಮಿ ನರೇಂದ್ರ ಪದವಿ ಪೂರ್ವ ಕಾಲೇಜು ಒಂದು ದಿನದ ಕಾರ್ಯಾಗಾರ ನಡೆಸಲಾಯಿತು.
ಪದವಿ ಪೂರ್ವ ಶಿಕ್ಷಣ ಇಲಾಖೆ, ಜಿಲ್ಲಾ ಪ್ರಿನ್ಸಿಪಾಲ ಹಾಗೂ ಉಪನ್ಯಾಸಕರ ಸಂಘ ಹಾಗೂ ಶ್ರೀ ಸ್ವಾಮಿ ನರೇಂದ್ರ ಪದವಿ ಪೂರ್ವ ಕಾಲೇಜು ಸಂಯುಕ್ತಾಶ್ರಯದಲ್ಲಿ 2024-2025ನೇ ಸಾಲಿನ ಫಲಿತಾಂಶ ಸುಧಾರಣೆಯ ಸಲುವಾಗಿ ಒಂದು ದಿನದ ಕಾರ್ಯಾಗಾರವನ್ನು ಜರುಗಿತು.
ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಪದವಿಪೂರ್ವ ಶಿಕ್ಷಣ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಚಂದ್ರಕಾಂತ್ ಶಾಬಾದಕರ್ , ಪದವಿಪೂರ್ವ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಕಲಿಕೆಗಾಗಿ ಪ್ರೇರಣೆ ನೀಡುವುದು ಮತ್ತು ಪಿಯುಸಿ ಫಲಿತಾಂಶ ಹೆಚ್ಚಳದ ಉದ್ದೇಶದಿಂದ ಈ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಜೀವಶಾಸ್ತ್ರ, ಗಣಿತಶಾಸ್ತ್ರ, ಸಮಾಜಶಾಸ್ತ್ರ ಮತ್ತು ರಾಜ್ಯಶಾಸ್ತ್ರ ವಿಷಯಗಳ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗಾಗಿ ವಿಶೇಷ ತರಬೇತಿ ನೀಡಲಾಗುತ್ತಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಅಧ್ಯಕ್ಷ ಚಂದ್ರಕಾಂತ್ ಪಾಟೀಲ್ ಮಾತನಾಡಿ, ಉಪನ್ಯಾಸಕರಿಗೆ ಫಲಿತಾಂಶ ಹೆಚ್ಚಳದ ಎಲ್ಲಾ ರೀತಿಯ ತರಬೇತಿ ನೀಡಲಾಗಿದೆ. ಕಳೆದ ಬಾರಿ ಪಿಯುಸಿ ಫಲಿತಾಂಶದಲ್ಲಿ ಜಿಲ್ಲೆಯು 19ನೇ ಸ್ಥಾನದಲ್ಲಿತ್ತು. ಈ ಬಾರಿ ಫಲಿತಾಂಶ ಪಟ್ಟಿಯಲ್ಲಿ ಉನ್ನತ ಮಟ್ಟಕ್ಕೆ ಏರುವ ಪ್ರಯತ್ನ ಮಾಡಲಾಗುತ್ತಿದೆ ಎಂದರು.
ಕಾರ್ಯಾಗಾರದ ಕೊನೆಯಲ್ಲಿ ಶಾಂತಿಕಿರಣ ಶಿಕ್ಷಣ ಸಂಸ್ಥೆಯ ಶ್ರೀ ಸ್ವಾಮಿ ನರೇಂದ್ರ ಪದವಿಪೂರ್ವ ಕಾಲೇಜಿನ ವತಿಯಿಂದ ತಯಾರಿಸಲಾದ 2025ರ ಗೋಡೆ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು.
ಈ ಸಂದರ್ಭದಲ್ಲಿ ಗುರುದೇವ ಆಶ್ರಮದ ಗಣೇಶಾನಂದ್ ಮಹಾರಾಜರು ದಿವ್ಯ ಸಾನಿಧ್ಯ ವಹಿಸಿದ್ದರು. ಜಿಲ್ಲಾ ಪ್ರಿನ್ಸಿಪಾಲರ ಸಂಘದ ಪ್ರಧಾನ ಕಾರ್ಯದರ್ಶಿ ಡಾ. ಮನ್ಮಥ್ ಡೋಳೆ, ಪ್ರಿನ್ಸಿಪಾಲರ ಸಂಘದ ರಾಜ್ಯ ಪ್ರತಿನಿಧಿ ಡಾ.ಎಸ್.ಪ್ರಭು, ಜಿಲ್ಲಾ ಉಪನ್ಯಾಸಕ ಸಂಘದ ಅಧ್ಯಕ್ಷ ಓಂಕಾಂತ್ ಸೂರ್ಯವಂಶಿ, ಶಾಂತಿಕಿರಣ ಶಿಕ್ಷಣ ಸಂಸ್ಥೆಯ ಕಲ್ಪನಾ ಮಠಪತಿ ಸೇರಿದಂತೆ ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.