ಬೀದರ್ | ಅಂಗವಿಕಲರ ಅಭಿವೃದ್ಧಿಗಾಗಿ ಎಲ್ಲ ರೀತಿಯ ಪ್ರಯತ್ನ : ಸಚಿವ ಈಶ್ವರ್ ಖಂಡ್ರೆ
ಬೀದರ್ : ಅಂಗವಿಕಲರ ಅಭಿವೃದ್ಧಿಗಾಗಿ ಅಗತ್ಯ ಸೌಲಭ್ಯಗಳನ್ನು ದೊರಕಿಸಿಕೊಡಲು ಎಲ್ಲ ರೀತಿಯ ಪ್ರಯತ್ನ ಮಾಡಲಾಗುವುದು ಎಂದು ಅರಣ್ಯ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ಹೇಳಿದ್ದಾರೆ.
ನಗರದ ಚನ್ನಬಸವ ಪಟ್ಟದೇವರು ರಂಗಮಂದಿರದಲ್ಲಿ ನಡೆದ ʼವಿಶ್ವ ಅಂಗವಿಕಲರ ದಿನಾಚರಣೆʼ ಸಮಾರಂಭದಲ್ಲಿ ಮಾತನಾಡಿದ ಅವರು, ಜಿಲ್ಲೆಯ ಎಲ್ಲ ಅಂಗವಿಕಲರಿಗೆ ವಸತಿ, ಉದ್ಯೋಗ, ಹಾಗೂ ವೈದ್ಯಕೀಯ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಸರಕಾರದಿಂದ ಎಲ್ಲ ರೀತಿಯ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳುವುದು ಎಂದು ತಿಳಿಸಿದರು.
ಕೆ.ಕೆ.ಆರ್.ಡಿ.ಬಿ. ವತಿಯಿಂದ ವಿಶೇಷ ಚೇತನರ ಅಭಿವೃದ್ಧಿಗೆ ಒಟ್ಟು ಅನುದಾನದ ಶೇ.5 ರಷ್ಟು ಮೀಸಲಿಡಲು ಪ್ರಸ್ತಾವನೆಯನ್ನು ಸಿದ್ದಪಡಿಸಲಾಗುವುದು. ಜಿಲ್ಲೆಯ ಎಲ್ಲ ವಿಶೇಷಚೇತನರಿಗೆ ವಸತಿ ನಿವೇಶ ಕಲ್ಪಿಸಲು ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ. ಈಗಾಗಲೇ ಸರಕಾರದ ವತಿಯಿಂದ ನೀಡುತ್ತಿರುವ ಮಾಶಾಸನವನ್ನು 800 ದಿಂದ 2 ಸಾವಿರ ರೂ. ಗೆ ಹೆಚ್ಚಿಸಲು ಮುಖ್ಯಮಂತ್ರಿಗಳ ಜೊತೆ ಚರ್ಚಿಸಲಾಗುವುದು ಎಂದು ಭರವಸೆ ನೀಡಿದರು.
ಅಂಗವಿಕಲರ ಅಭಿವೃದ್ಧಿಗಾಗಿ ಇರುವ ಎಲ್ಲ ಅನುದಾನವನ್ನು ಸರಿಯಾಗಿ ಬಳಸಿಕೊಳ್ಳಲು ಅಂಗವಿಕಲರ ಕೋಶ ಸ್ಥಾಪನೆಗೆ ಸಚಿವ ಸಂಪುಟದಲ್ಲಿ ಚರ್ಚಿಸಲಾಗುವುದು. ಬುದ್ಧಿಮಾಂದ್ಯರು ಸಾಕಷ್ಟು ಒತ್ತಡದಲ್ಲಿದ್ದು, ಅವರಿಗಾಗಿ ವಿಶೇಷ ಶಾಲೆಯನ್ನು ಸ್ಥಾಪಿಸಲಾಗುವುದು. ಈಗಾಗಲೇ ಚಾಲ್ತಿಯಲ್ಲಿರುವ ಅಂಧ ಶಾಲೆಗಳಿಗೆ ಕೆ.ಕೆ.ಆರ್.ಡಿ.ಬಿ.ಯಿಂದ ಹೆಚ್ಚಿನ ಅನುದಾನ ಬಿಡುಗಡೆಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಎಲ್ಲ ಅಂಗವಿಕಲರು ಖುದ್ದಾಗಿ ಬಂದು ಯೋಜನೆಗಳಿಗೆ ಅರ್ಜಿ ಹಾಕಿ ಸದುಪಯೋಗ ಪಡೆಯಲು ಆಗುವುದಿಲ್ಲ. ಅಧಿಕಾರಿಗಳು ಅಂತಹ ಅಂಗವಿಕಲರ ಮನೆಗೆ ತೆರಳಿ ಮಾಶಾಸನ ಹಾಗೂ ಇತರೇ ಸೌಲಭ್ಯ ವಿತರಿಸಲು ಕ್ರಮಕೈಗೊಳ್ಳುವಂತೆ ಸೂಚಿಸಿದರು.
ತಮ್ಮ ಅನುದಾನದಡಿ 25 ಲಕ್ಷ ರೂ. ಹಾಗೂ ಸಂಸದರಾದ ಸಾಗರ ಖಂಡ್ರೆ ಅವರ ಅನುದಾನದಡಿ 50 ಲಕ್ಷ ರೂ. ಖರ್ಚಿನಲ್ಲಿ ಅಂಗವಿಕಲರಿಗೆ ವಿಶೇಷ ಸಲಕರಣೆಗಳನ್ನು ವಿತರಿಸಲಾಗುವುದು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ವಿಕಲಚೇತನರಿಗೆ ಅಲಿಮಕೋ ಸಂಸ್ಥೆ ವತಿಯಿಂದ ಸಾಧನ ಸಲಕರಣೆ ಹಾಗೂ ಇಲಾಖೆ ವತಿಯಿಂದ ತ್ರಿಚಕ್ರ ವಾಹನ ನೀಡಲಾಯಿತು. ವಿಕಲಚೇತನರ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಕ್ರೀಡೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.