ಬೀದರ್ | ಅನ್ನಭಾಗ್ಯ ಯೋಜನೆ; ನೇರ ನಗದು ಬದಲಾಗಿ 5 ಕೆ.ಜಿ ಅಕ್ಕಿ ವಿತರಿಸಲು ಆದೇಶ : ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ

ಬೀದರ್ : ಸಾರ್ವಜನಿಕ ವಿತರಣಾ ಪದ್ದತಿಯಡಿ ಆದ್ಯತಾ ಪಡಿತರ ಅಂತ್ಯೋದಯ ಹಾಗೂ ಬಿಪಿಎಲ್ ಚೀಟಿಯ ಫಲಾನುಭವಿಗೆ ರಾಜ್ಯ ಸರ್ಕಾರದ 5 ಕೆ.ಜಿ ಅಕ್ಕಿ ಬದಲಾಗಿ ಪ್ರತಿ ಕೆ.ಜಿಗೆ 34 ರೂ. ನಂತೆ ತಿಂಗಳಿಗೆ 170 ರೂ. ವಿತರಿಸಲಾಗುತ್ತಿತ್ತು. ಆದರೆ ಈ ಫೆಬ್ರವರಿ ತಿಂಗಳಿಂದ ಹಣದ ಬದಲಾಗಿ ಅಕ್ಕಿ ವಿತರಿಸಲು ಸರ್ಕಾರ ಆದೇಶ ಮಾಡಿದೆ ಎಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ತಿಳಿಸಿದ್ದಾರೆ.
ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯ ಅನ್ವಯ ವಿತರಿಸಲಾಗುವ ಕೇಂದ್ರ ಸರ್ಕಾರದ 5 ಕೆ.ಜಿ ಅಕ್ಕಿಯೊಂದಿಗೆ ರಾಜ್ಯ ಸರ್ಕಾರದ ವತಿಯಿಂದ ಹೆಚ್ಚುವರಿಯಾಗಿ 5 ಕೆ.ಜಿ ಅಕ್ಕಿಯ ಬದಲಾಗಿ ಪ್ರತಿ ಕೆ.ಜಿಗೆ 34 ರೂ. ಯಂತೆ ಪಡಿತರ ಚೀಟಿಯಲ್ಲಿನ ಕುಟುಂಬದ ಮುಖ್ಯಸ್ಥರ ಬ್ಯಾಂಕ್ ಖಾತೆಗೆ ಡಿ.ಬಿ.ಟಿ ಮೂಲಕ 170 ರೂ. ವರ್ಗಾಯಿಸಲಾಗುತ್ತಿತ್ತು.
2025 ರ ಫೆಬ್ರವರಿ ತಿಂಗಳ ವಿತರಣೆಯು ಪೂರ್ಣಗೊಂಡಿರುವುದರಿಂದ ಈ ತಿಂಗಳ ಹೆಚ್ಚುವರಿ ಅಕ್ಕಿ ಮಾರ್ಚ್ ತಿಂಗಳ ಹಂಚಿಕೆಯೊಂದಿಗೆ ವಿತರಣೆ ಮಾಡಲಾಗುವುದು. ಆದ್ದರಿಂದ ಮಾರ್ಚ್ ತಿಂಗಳಲ್ಲಿನ ಆದ್ಯತಾ ಪಡಿತರ ಚೀಟಿಯಲ್ಲಿನ ಪ್ರತಿ ಫಲಾನುಭವಿಗಳಿಗೆ ಒಟ್ಟು 15 ಕೆ.ಜಿ ಅಕ್ಕಿ ವಿತರಣೆ ಮಾಡಲಾಗುವುದು. ಹಾಗೆಯೇ 4 ಸದಸ್ಯರಕ್ಕಿಂತ ಕಡಿಮೆ ಇರುವ ಅಂತ್ಯೋದಯ ಪಡಿತರ ಚೀಟಿದಾರರಿಗೆ 35 ಕೆ.ಜಿ ಅಕ್ಕಿ ವಿತರಣೆ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ.
4 ಸದಸ್ಯರಿರುವ ಎಎವೈ ಪಡಿತರ ಚೀಟಿದಾರರಿಗೆ 45 ಕೆ.ಜಿ, 5 ಸದಸ್ಯರಿರುವ ಎಎವೈ ಪಡಿತರ ಚೀಟಿದಾರರಿಗೆ 65 ಕೆ.ಜಿ, 6 ಸದಸ್ಯರಿರುವ ಎಎವೈ ಪಡಿತರ ಚೀಟಿದಾರರಿಗೆ 85 ಕೆ.ಜಿ ಅಕ್ಕಿ ವಿತರಣೆ ಮಾಡಲಾಗುವುದು. ಮುಂದುವರೆದು ವಿತರಣೆ ಮಾಡಿದ ಪಡಿತರ ಅಕ್ಕಿಯನ್ನು ಪಡಿತರ ಚೀಟಿದಾರರು ಯಾವುದೇ ಕಾರಣಕ್ಕೂ ಮಾರಾಟ ಮಾಡುವಂತಿಲ್ಲ. ಒಂದು ವೇಳೆ ಪಡಿತರ ಅಕ್ಕಿ ಮಾರಾಟ ಮಾಡುವುದು ಕಂಡು ಬಂದಲ್ಲಿ ಅಂತಹ ಪಡಿತರ ಚೀಟಿದಾರರ ಪಡಿತರ ಚೀಟಿ ಅಮಾನತುಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಸಾರ್ವಜನಿಕ ವಿತರಣಾ ಪದ್ಧತಿ ಅಡಿಯಲ್ಲಿ ಯಾವುದೇ ದೂರುಗಳು ಇದ್ದಲ್ಲಿ ಆಹಾರ ಇಲಾಖೆಯ ಸಿಬ್ಬಂದಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.