ಬೀದರ್ | ವಕ್ಫ್ ವಿರೋಧಿ ಹೋರಾಟ : ಬಿಜೆಪಿಯಲ್ಲಿಯೇ ಹಗ್ಗ- ಜಗ್ಗಾಟ
ಯತ್ನಾಳ್ ರನ್ನು ತರಾಟೆಗೆ ತೆಗೆದುಕೊಂಡ ಬಿಜೆಪಿ ಕಾರ್ಯಕರ್ತರು
ಬೀದರ್ : ಬಿಜೆಪಿಯಲ್ಲಿನ ಭಿನ್ನಮತೀಯ ನಾಯಕರು ಎಂದು ಗುರುತಿಸಿಕೊಂಡಿರುವ ಹಲವರು ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ನೇತೃತ್ವದಲ್ಲಿ ಸೋಮವಾರ ರಾಜ್ಯವ್ಯಾಪಿ ವಕ್ಫ್ ವಿರೋಧಿ ಹೋರಾಟವನ್ನು ಬೀದರ್ ನಗರದಿಂದ ಆರಂಭಿಸಿದ್ದಾರೆ.
ಈ ಪ್ರತಿಭಟನೆಯ ಬ್ಯಾನರ್‌ನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಭಾವಚಿತ್ರ ಇಲ್ಲದೇ ಇರುವುದರಿಂದ ಸ್ಥಳೀಯ ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರು ಯತ್ನಾಳ್ ಅವರನ್ನು ತರಾಟೆಗೆ ತೆಗೆದುಕೊಂಡರು. ಯತ್ನಾಳ್ ಅವರ ಪರ ಹಾಗೂ ವಿರೋಧಿ ಗುಂಪುಗಳಲ್ಲಿನ ಕಾರ್ಯಕರ್ತರ ಮಧ್ಯೆ ಮಾತಿನ ಚಕಮಕಿ ಉಂಟಾಯಿತು.
ಬಿಜೆಪಿಯಿಂದಲೇ ವಕ್ಫ್ ವಿರೋಧಿ ಹೋರಾಟಕ್ಕೆ ಮೂರು ತಂಡಗಳನ್ನು ರಚಿಸಲಾಗಿದ್ದು, ಭಿನ್ನಮತೀಯರು ಹೋರಾಟ ಆರಂಭಿಸಿದ್ದು ಸರಿಯಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷರನ್ನು ಸಮರ್ಥಿಸಿ ಹಲವು ಬಿಜೆಪಿ ಕಾರ್ಯಕರ್ತರು ಯತ್ನಾಳ್ ಅವರ ತಂಡದ ವಿರುದ್ಧ ಹರಿಹಾಯ್ದರು.
ಭಿನ್ನಮತೀಯರಿಂದ ಗೊಂದಲ ಸೃಷ್ಟಿಯಾಗುತ್ತಿದೆ. ಕೂಡಲೇ ವರಿಷ್ಠರು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಪಕ್ಷದಿಂದ ಉಚ್ಛಾಟಿಸಬೇಕು ಎಂದೂ ಕೆಲವು ಬಿಜೆಪಿ ಕಾರ್ಯಕರ್ತರು ಒತ್ತಾಯಿಸಿದರು.
ಯತ್ನಾಳ್ ಅವರು ಧರ್ಮಪುರ್ ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಮಧ್ಯೆ ಮಾತಿನ ಚಕಮಕಿ ನಡೆದು ಕೈ ಕೈ ಮಿಲಾಸಿಕೊಂಡಿದ್ದಾರೆ. ನೀವು ಯಾಕೆ ನಮ್ಮ ಗ್ರಾಮದಲ್ಲಿ ಗಲಾಟೆ ಮಾಡುತ್ತಿದ್ದೀರಿ ಎಂದು ಗ್ರಾಮಸ್ಥರು ಬಿಜೆಪಿ ಕಾರ್ಯಕರ್ತರಿಗೆ ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಪರಸ್ಪರ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಮಧ್ಯೆ ಮಾತಿನ ಚಕಮಕಿ ನಡೆದಿದೆ ಎನ್ನಲಾಗಿದೆ.
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೇತೃತ್ವದಲ್ಲಿ ಪ್ರತ್ಯೇಕ ವಕ್ಫ್ ಹೋರಾಟ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದು, ಸುಮಾರು 150ಕ್ಕೂ ಅಧಿಕ ಪೊಲೀಸರ ನಿಯೋಜನೆ ಮಾಡಿತ್ತು.
ಒಬ್ಬರು ಡಿವೈಎಸ್ಪಿ, ಐವರು ಇನ್ಸ್ಪೆಕ್ಟರ್, 10 ಪಿಎಸ್‍ಐಗಳು, 15 ಎಎಸ್‍ಐಗಳು, 80 ಜನ ಮುಖ್ಯ ಪೇದೆಗಳು, 20 ಮಹಿಳಾ ಸಿಬ್ಬಂದಿ, 2 ಡಿಆರ್, 10 ಜನ ಕ್ರೈಂ ಟೀಂ ನಿಯೋಜಿಸಲಾಗಿತ್ತು. ಜೊತೆಗೆ ಮೂರು ವಿಡಿಯೋ ಕ್ಯಾಮೆರಾ ಬಳಕೆ ಮಾಡಲಾಗಿತ್ತು. ಗಣೇಶ್ ಮೈದಾನದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆಯನ್ನು ಯತ್ನಾಳ್ ತಂಡದವರು ಮಾಡಿದರು.