ಬೀದರ್ | ಡಿಸಿಸಿ ಬ್ಯಾಂಕ್ನಿಂದ ಸಕ್ಕರೆ ಕಾರ್ಖಾನೆ ಹರಾಜು : ರೈತರಿಂದ ಪ್ರತಿಭಟನೆ
ಬೀದರ್ : ಜಿಲ್ಲೆಯಲ್ಲಿರುವ ಸಹಕಾರ ಸಕ್ಕರೆ ಕಾರ್ಖಾನೆಯನ್ನು ಡಿಸಿಸಿ ಬ್ಯಾಂಕ್ ಹರಾಜಿಗೆ ಇಟ್ಟಿರುವುದನ್ನು ವಿರೋಧಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ನಗರದ ಡಿಸಿಸಿ ಬ್ಯಾಂಕ್ ಎದುರುಗಡೆ ಪ್ರತಿಭಟನೆ ನಡೆಸಿದರು.
ಸಾಲದ ಸುಳಿಗೆ ಸಿಲುಕಿ ಬಂದ್ ಆಗಿರುವ ಬಿ.ಎಸ್.ಎಸ್.ಕೆ. ಕಾರ್ಖಾನೆಯ ವಸ್ತುಗಳನ್ನು ಸೋಮವಾರ ಡಿಸಿಸಿ ಬ್ಯಾಂಕಿನ ಒಳಗೆ ಹರಾಜು ಪ್ರಕ್ರಿಯೆ ನಡೆಯುತ್ತಿದ್ದರೆ ಹೊರಗೆ ರೈತರು ಘೋಷಣೆ ಕೂಗುತ್ತ ಪ್ರತಿಭಟಿಸಿದರು. ಬ್ಯಾಂಕಿನ ಒಳಗೆ ನುಗ್ಗಲು ಪ್ರಯತ್ನಿಸಿದ ರೈತರನ್ನು ಮೊದಲೇ ಬಂದೋಬಸ್ತ್ ನಲ್ಲಿದ್ದ ಪೊಲೀಸರು ಬ್ಯಾರಿಕೇಡ್ ಅಳವಡಿಸಿ ಬ್ಯಾಂಕ್ ಹೊರಭಾಗದಲ್ಲಿ ತಡೆದಿದ್ದಾರೆ.
ರೈತಸಂಘದ ಜಿಲ್ಲಾಧ್ಯಕ್ಷ ಸಿದ್ರಾಮಪ್ಪ ಆಣದೂರೆ ಮಾತನಾಡಿ, ಬ್ಯಾಂಕಿನ ಮೇಲೆ 235 ಕೋಟಿ ರೂ. ಸಾಲ ಇದೆ. ಸರಕಾರ ಬ್ಯಾಂಕಿಗೆ ಸಾಲ ಪಾವತಿಸಿ, ಕಾರ್ಖಾನೆ ಮರು ಆರಂಭಿಸಿ, ಹರಾಜು ಮಾಡಬಾರದು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ದಯಾನಂದ ಸಿರ್ಸೆ, ಬಸವರಾಜ್, ಮಾಣಿಕರಾವ್, ರಾಚಪ್ಪ ಮತ್ತಿತರರು ಭಾಗವಹಿಸಿದರು.