ಬೀದರ್ | ಅಯೋಧ್ಯೆಯಲ್ಲಿ ದಲಿತ ಯುವತಿಯ ಹತ್ಯೆ ಪ್ರಕರಣ: ಆರೋಪಿಗಳಿಗೆ ಗಲ್ಲು ಶಿಕ್ಷೆ ನೀಡಲು ಒತ್ತಾಯ

ಬೀದರ್ : ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ದಲಿತ ಯುವತಿ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ಎಸಗಿ ಹತ್ಯೆ ಮಾಡಿರುವ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಭಾರತೀಯ ದಲಿತ ಪ್ಯಾಂಥರ್ ಸಂಘಟನೆಯು ಒತ್ತಾಯಿಸಿದೆ.
ಇಂದು ಹುಮನಾಬಾದ್ ನಗರದ ಪ್ರವಾಸಿ ಮಂದಿರದಿಂದ ಅಂಬೇಡ್ಕರ್ ವೃತ್ತದ ವರೆಗೆ ನೂರಾರು ಜನ ಪ್ರತಿಭಟನಾ ಮೆರವಣಿಗೆ ಮೂಲಕ ತಹಶೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಉತ್ತರ ಪ್ರದೇಶದ ಅಯೋಧ್ಯೆ ಜಿಲ್ಲೆಯ ಸೈನವ ಎಂಬ ಗ್ರಾಮದಲ್ಲಿ 22 ವರ್ಷದ ದಲಿತ ಯುವತಿ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿದೆ. ಆದರೆ ಅಲ್ಲಿನ ಸರಕಾರ ಆರೋಪಿಗಳನ್ನು ಬಂಧಿಸಿ ಶಿಕ್ಷೆ ನೀಡುವ ಕೆಲಸ ಮಾಡುತ್ತಿಲ್ಲ. ಉತ್ತರ ಪ್ರದೇಶದಲ್ಲಿ ಇಂತಹ ಘಟನೆಗಳು ಪದೇ ಪದೇ ನಡೆಯುತ್ತಿವೆ. ಆದರೂ ಕೂಡ ಅಲ್ಲಿನ ಸರಕಾರ ಹಾಗೂ ಪೊಲೀಸ್ ಇಲಾಖೆ ಎಚ್ಚೆತ್ತುಕೊಳ್ಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇಂತಹ ಅತ್ಯಾಚಾರ ಘಟನೆಗಳು ತಡೆಯಬೇಕು ಎಂದರೆ, ಆರೋಪಿಗಳನ್ನು ಗಲ್ಲು ಶಿಕ್ಷೆಯಂತಹ ಕಠಿಣ ಶಿಕ್ಷೆ ನೀಡಬೇಕು. ಹಾಗೆ ಮಾಡಿದರೆ ಮಾತ್ರ ಇಂತಹ ಘಟನೆಗಳನ್ನು ತಡೆ ಹಿಡಿಯಬಹುದು. ಅತ್ಯಾಚಾರದ ಆರೋಪಿಗಳಿಗೆ ಕಠಿಣ ಶಿಕ್ಷೆಗೆ ನೀಡದಿದ್ದರೆ ರಾಜ್ಯದಾದ್ಯಂತ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಭಾರತೀಯ ದಲಿತ ಪ್ಯಾಂಥರ ಸಂಘಟನೆಯ ತಾಲ್ಲೂಕು ಅಧ್ಯಕ್ಷ ಗಣಪತಿ ಅಷ್ಟೋರೆ, ಉಪಾಧ್ಯಕ್ಷ ಸಿದ್ದಾರ್ಥ್ ಜಾನವಿರ್, ಸುಶೀಲಕುಮಾರ್ ಎಚ್. ಭೋಲಾ, ಶಿವಕುಮಾರ್ ಮಾಡಗೂಳ್, ಯುವರಾಜ್ ಐಹೊಳಿ, ಶಶಿಕುಮಾರ್ ಡಾಂಗೆ, ದೇವೇಂದ್ರ ಗದ್ದಾರ್, ಪ್ರಭಾವತಿ, ಕಾವೇರಿ ಕಾಂಬ್ಳೆ, ಮೀನಾಕ್ಷಿ, ಆನಂತ್ ಮಾಳಗೆ ಹಾಗೂ ಶಿವಕುಮಾರ್ ಸಾಗರ್ ಸೇರಿದಂತೆ ಅನೇಕ ಜನ ಭಾಗವಹಿಸಿದ್ದರು.