ಬೀದರ್ | ಅಮಿತ್ ಶಾ ಅವರ ರಾಜೀನಾಮೆಗೆ ಭೀಮ್ ಆರ್ಮಿ ಆಗ್ರಹ
ಬೀದರ್ : ಅಂಬೇಡ್ಕರ್ ಅವರ ಬಗ್ಗೆ ಅವಮಾನಕರ ಹೇಳಿಕೆ ನೀಡಿದ ಹಿನ್ನೆಲೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಾಜೀನಾಮೆ ನೀಡುವಂತೆ ಆಗ್ರಹಿಸಿ ಭೀಮ್ ಆರ್ಮಿಯಿಂದ ಪ್ರತಿಭಟನೆ ನಡೆಸಲಾಯಿತು.
ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಯವರಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ ಅಮಿತ್ ಶಾ ಅವರು ರಾಜ್ಯಸಭೆಯಲ್ಲಿ ಅಂಬೇಡ್ಕರ್ ಹೆಸರನ್ನು ಉಚ್ಚರಿಸುವುದು ಈಗ ಫ್ಯಾಷನ್ ಆಗಿದೆ. ಅಂಬೇಡ್ಕರ್ ಹೆಸರನ್ನು ಉಚ್ಚರಿಸುವ ಬದಲು ದೇವರ ಹೆಸರನ್ನು ಉಚ್ಚರಿಸಿದರೆ ಏಳು ಜನ್ಮಗಳವರೆಗೂ ಸ್ವರ್ಗವನ್ನು ಪಡೆಯಬಹುದು ಎಂಬ ಹೇಳಿಕೆ ನೀಡಿ ಅಂಬೇಡ್ಕರ್ ಅವರನ್ನು ಅವಮಾನ ಮಾಡಿದ್ದಾರೆ ಎಂದು ದೂರಲಾಗಿದೆ.
ಪ್ರಜಾಪ್ರಭುತ್ವದ, ಸಮನತೆಯ ವಿರುದ್ಧವಾದ ಮತ್ತು ಡಾ.ಅಂಬೇಡ್ಕರ್ ಅವರ ಗೌರವಕ್ಕೆ ಅವಮಾನವಾಗುವ ಹೇಳಿಕೆ ಗೃಹ ಸಚಿವರ ಸ್ಥಾನಕ್ಕೆ ಶೋಭೆ ನೀಡುವುದಿಲ್ಲ. ಅವರ ವಿರುದ್ಧ ಕ್ರಮ ಕೈಗೊಂಡು, ಅವರ ರಾಜಿನಾಮೆ ಪಡೆಯಬೇಕು ಎಂದು ಭೀಮ್ ಆರ್ಮಿ ಆಗ್ರಹ ಮಾಡಿದೆ.
ಈ ಸಂದರ್ಭದಲ್ಲಿ ಭೀಮ್ ಆರ್ಮಿ ಜಿಲ್ಲಾಧ್ಯಕ್ಷ ಅಂಬರೀಶ್ ಕುದರೆ, ಜಿಲ್ಲಾ ಉಪಾಧ್ಯಕ್ಷ ಗೌತಮ್ ಬಗದಲಕರ್, DSS ರಾಜ್ಯ ಉಪಾಧ್ಯಕ್ಷ ರಾಜಕುಮಾರ್ ಮೂಲಭಾರತಿ, DSS ವಿಭಾಗೀಯ ಅಧ್ಯಕ್ಷ ಉಮೇಶ್ ಸೊರಳ್ಳಿಕರ್, ಆರ್ ಪಿ ಐ (ಡಿ) ರಾಜ್ಯಾಧ್ಯಕ್ಷ ಮಹೇಶ್ ಗೊರನಾಳಕರ್, DUM ರಾಜ್ಯಾಧ್ಯಕ್ಷ ಪ್ರಕಾಶ್ ರಾವಣ, ಅಖಿಲೇಶ್ ಸಾಗರ್, ಸಂಜುಕುಮಾರ್ ಮೇತ್ರೆ ಹಾಗೂ ಮತ್ತಿತರರು ಭಾಗವಹಿಸಿದ್ದರು.