ಬೀದರ್ | ಬ್ರೀಮ್ಸ್ ಆಸ್ಪತ್ರೆಗೆ ಮುಸ್ಕಾನ್ ರಾಷ್ಟ್ರೀಯ ಪ್ರಮಾಣ ಪತ್ರ

ಬೀದರ್ : ಮಕ್ಕಳ ಉತ್ತಮ ಗುಣಮಟ್ಟದ ಚಿಕಿತ್ಸೆಗೆ ಬ್ರಿಮ್ಸ್ ಆಸ್ಪತ್ರೆಗೆ ಕೇಂದ್ರ ಸರ್ಕಾರವು ಮುಸ್ಕಾನ್ ರಾಷ್ಟ್ರೀಯ ಪ್ರಮಾಣ ಪತ್ರ ನೀಡಿದೆ ಎಂದು ಬ್ರೀಮ್ಸ್ ಬೋಧಕ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಶಿವಯೋಗಿ ಬಾಳಿ ಅವರು ತಿಳಿಸಿದ್ದಾರೆ.
ಮುಸ್ಕಾನ್ ಮಹತ್ವಕಾಂಕ್ಷಿಯ ರಾಷ್ಟ್ರೀಯ ಕಾರ್ಯಕ್ರಮವಾಗಿದ್ದು, ಇದರ ಅಡಿಯಲ್ಲಿ ನವಜಾತ ಶಿಶುವಿನಿಂದ ಹಿಡಿದು 12 ವರ್ಷದ ಮಕ್ಕಳಿಗೆ ಗುಣಮಟ್ಟದ ಚಿಕಿತ್ಸೆ ನೀಡುವ ಗುರಿ ಹೊಂದಿರುತ್ತದೆ. ಈ ಕಾರ್ಯಕ್ರಮದ ಅಡಿಯಲ್ಲಿ ಮಕ್ಕಳ ವಿಭಾಗದ 4 ವಿಭಾಗಗಳಾದ ಹೊರ ರೋಗಿ ವಿಭಾಗ, ಒಳ ರೋಗಿ ವಿಭಾಗ, ನವಜಾತ ಶಿಶು ತೀವ್ರ ನಿಗಾ ಘಟಕ ಮತ್ತು ಅಪೌಷ್ಠಿಕ ಮಕ್ಕಳ ಪುರ್ನವಸತಿ ವಿಭಾಗಗಳನ್ನು ಒಳಗೊಂಡಿವೆ ಎಂದಿದ್ದಾರೆ.
ಈ ನಾಲ್ಕು ವಿಭಾಗಗಳನ್ನು ರಾಷ್ಟ್ರೀಯ ಮಾನದಂಡಗಳ ಅನ್ವಯ ಬೇರೆ ರಾಜ್ಯದಿಂದ ಕೇಂದ್ರ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ವತಿಯಿಂದ ನಿಯೋಜನೆಗೊಳಿಸಲಾದ ಮೌಲ್ಯಮಾಪಕರು ಆರೋಗ್ಯ ಸಂಸ್ಥೆಗೆ ಭೇಟಿ ನೀಡಿ 2 ದಿನಗಳ ಕಾಲ ಮೌಲ್ಯಮಾಪನ ನಡೆಸಿ ಕೇಂದ್ರಕ್ಕೆ ವರದಿ ಸಲ್ಲಿಸಿದ್ದಾರೆ. ಕೇಂದ್ರ ಸರ್ಕಾರವು ವರದಿಯನ್ನು ಕೂಲಂಕೂಷವಾಗಿ ಪರೀಶಿಲಿಸಿ ಮುಸ್ಕಾನ್ ರಾಷ್ಟ್ರೀಯ ಪ್ರಮಾಣ ಪತ್ರ ನೀಡಿದೆ. ಈ ಪ್ರಮಾಣ ಪತ್ರ ಪಡೆಯಲು 70 ಪ್ರತಿಶತ ಅಂಕಗಳು ಬೇಕಾಗಿರುತ್ತದೆ. ಬ್ರಿಮ್ಸ್ ಆಸ್ಪತ್ರೆಯು ಶೇ.88.68 ರಷ್ಟು ಅಂಕಗಳು ಗಳಿಸಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಬ್ರಿಮ್ಸ್ ಸಂಸ್ಥೆಯಲ್ಲಿ ಹುಟ್ಟಿದ ನವಜಾತ ಶಿಶುವಿನಿಂದ 12 ವರ್ಷದ ಮಕ್ಕಳಿಗೆ ಉತ್ತಮ ಗುಣಮಟ್ಟದ ಚಿಕಿತ್ಸೆ ನೀಡಲಾಗುತ್ತದೆ. ಹೊರರೋಗಿ ಮತ್ತು ಒಳರೋಗಿ ವಿಭಾಗದ ಮಕ್ಕಳಿಗೆ ಉಚಿತ ಲಸಿಕೆ ಮತ್ತು ಅಪೌಷ್ಠಿಕ ಮಕ್ಕಳಿಗೆ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತದೆ. ಇದರ ಸದುಪಯೋಗ ಜಿಲ್ಲೆಯ ಜನತೆ ತೆಗೆದುಕೊಳ್ಳಬೇಕು ಎಂದು ಕೋರಿದ್ದಾರೆ.
ಬ್ರಿಮ್ಸ್ ಆಸ್ಪತ್ರೆಯು ಮುಸ್ಕಾನ್ ರಾಷ್ಟ್ರೀಯ ಪ್ರಮಾಣ ಪತ್ರ ಪಡೆಯುವಲ್ಲಿ ಮಕ್ಕಳ ವಿಭಾಗದ ಮುಖ್ಯಸ್ಥರಾದ ಡಾ.ಶಾಂತಲಾ ಕೌಜಲಗಿ ಅವರ ಪ್ರಯತ್ನ ತುಂಬಾ ಸಹಕಾರಿಯಾಗಿದೆ ಎಂದು ಅವರು ಹೇಳಿದ್ದಾರೆ.
ಬ್ರಿಮ್ಸ್ ಬೋಧಕ ಆಸ್ಪತ್ರೆಗೆ ಮುಸ್ಕಾನ್ ರಾಷ್ಟ್ರೀಯ ಪ್ರಮಾಣ ಪತ್ರ ಪಡೆದಿದ್ದಕ್ಕಾಗಿ ಸಂಸ್ಥೆಯ ನಿರ್ದೇಶಕ ಡಾ.ಶಿವಕುಮಾರ್ ಶೆಟಕಾರ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಮಹಮ್ಮದ್ ಅಹಮ್ಮದುದ್ದೀನ್ ಅವರು ಹರ್ಷ ವ್ಯಕ್ತಪಡಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.