ಬೀದರ್ | ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಸಚಿವ ಸಂಪುಟದಿಂದ ಕೈಬಿಡಲು ಬಿ.ವೈ.ವಿಜಯೇಂದ್ರ ಆಗ್ರಹ
ಸಚಿನ್ ಆತ್ಮಹತ್ಯೆ ಪ್ರಕರಣವನ್ನು ಸಿಬಿಐಗೆ ಒಪ್ಪಿಸಲು ಒತ್ತಾಯ
ಬೀದರ್ : ಸಚಿನ್ ಪಾಂಚಾಳ್ ಆತ್ಮಹತ್ಯೆ ಪ್ರಕರಣವನ್ನು ಸಿಬಿಐಗೆ ಒಪ್ಪಿಸಿ, ಅವರ ಕುಟುಂಬಕ್ಕೆ 1 ಕೋಟಿ ರೂ. ಪರಿಹಾರ ಮತ್ತು ಕುಟುಂಬದಲ್ಲಿನ ಒಬ್ಬ ಸದಸ್ಯರಿಗೆ ಅವರ ಸರಕಾರಿ ನೌಕರಿ ನೀಡಬೇಕೆಂದು ಎಂದು ಬಿಜೆಪಿ ಪಕ್ಷದ ರಾಜಧ್ಯಕ್ಷ ಬಿ.ವೈ.ವಿಜಯೇಂದ್ರ ಒತ್ತಾಯಿಸಿದ್ದಾರೆ.
ಇಂದು ಭಾಲ್ಕಿ ತಾಲ್ಲೂಕಿನ ಕಟ್ಟಿ ತುಗಾಂವ್ ಗ್ರಾಮದ ಸಚಿನ್ ಪಾಂಚಾಳ್ ಅವರ ಮನೆಗೆ ಆಗಮಿಸಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ನಂತರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಾಗಿನಿಂದ ಈ ರೀತಿಯ 4-5 ಪ್ರಕರಣಗಳು ನಡೆದಿವೆ. ಎಲ್ಲ ಪ್ರಕರಣಗಳು ಕೂಡ ರಾಜಕೀಯ ಒತ್ತಡದಿಂದ ವ್ಯವಸ್ಥಿತವಾಗಿ ಮುಚ್ಚಲಾಗಿದೆ ಎಂದು ಕಾಂಗ್ರೆಸ್ ಸರಕಾರದ ವಿರುದ್ಧ ಹರಿಹಾಯ್ದರು.
ರಾಜು ಕಪನೂರ್ ಅವರು, ಸಚಿನ್ ಅವರಿಗೆ ಬೆದರಿಕೆ ಹಾಕಿದ್ದಾರೆ. ಬೆಳ್ಳಂಬೆಳಿಗ್ಗೆ ಸಚಿನ್ ಅವರ ಮನೆಗೆ ಬಂದು ಸಚಿನ್ ಅವರ ಸಹೋದರಿಯರಿಗೆ ಬೆದರಿಕೆ ಹಾಕಿದ್ದಾರೆ. ಇದು ಅಕ್ಷಮ್ಯ ಅಪರಾಧವಾಗಿದೆ. ಕಾಂಗ್ರೆಸ್ ಸರ್ಕಾರಕ್ಕೆ ಸ್ವಲ್ಪವಾದರೂ ಮಾನ ಮರ್ಯಾದೆ ಇದ್ದರೆ ಪಾರದರ್ಶಕವಾಗಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ರಾಜು ಕಪನೂರ್ ಅವರು ಪ್ರಿಯಾಂಕ್ ಖರ್ಗೆ ಅವರ ಬಲಗೈ ಬಂಟ. ಇವರು ನಿರಂತರವಾಗಿ ಸಚಿನ್ ಅವರ ಕುಟುಂಬಕ್ಕೆ ಬೆದರಿಕೆ ಹಾಕಿದ್ದಾರೆ. ಅವರ ಬೆದರಿಕೆಯಿಂದ ಸಚಿನ್ ಆತ್ಮಹತ್ಯೆ ಮಾಡಿಕೊಂಡಿದ್ದು, ಹಾಗಾಗಿ ಪ್ರಿಯಾಂಕ್ ಖರ್ಗೆ ಅವರನ್ನು ತಕ್ಷಣವೇ ಸಚಿವ ಸಂಪುಟದಿಂದ ವಜಾಗೊಳಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಆಗ್ರಹಿಸಲಾಗುವುದೆಂದು ತಿಳಿಸಿದರು.
ಡಿ.25 ರಂದು ಸಚಿನ್ ಪಾಂಚಾಳ್ ಅವರ ಸಹೋದರಿಯರು ಪೊಲೀಸ್ ಠಾಣೆಗೆ ದೂರು ನೀಡಲು ಹೋದಾಗ ಪೊಲೀಸರು ದೂರು ಸ್ವೀಕರಿಸದೇ ಕಡೆಗಣಿಸಿದ್ದಾರೆ. ಪೊಲೀಸರು ಇವರ ದೂರನ್ನು ಕಡೆಗಣಿಸದೇ ಇದ್ದರೆ ಬಹುಶಃ ಸಚಿನ್ ಅವರ ಜೀವ ಉಳಿಯುತಿತ್ತು. ಈ ಪ್ರಕರಣವನ್ನು ಸಚಿನ್ ಅವರ ಕುಟುಂಬಸ್ಥರು ಸಿಬಿಐ ಗೆ ಒಪ್ಪಿಸಬೇಕು ಎಂದು ಹೇಳುತ್ತಿದ್ದಾರೆ. ಅವರ ಹೇಳಿಕೆಯಂತೆ ಈ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು. ಇದರ ಹಿಂದಿರುವ ಯಾವುದೇ ಮಹಾಪುರುಷರಾದರೂ ಇದ್ದರೂ ಕಠಿಣ ಕ್ರಮ ಕೈಗೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಛಲವಾದಿ ನಾರಯಣಸ್ವಾಮಿ, ರವಿಕುಮಾರ್, ವಿಧಾನ ಪರಿಷತ್ ಸದಸ್ಯ ಶಶೀಲ್ ನಮೋಶಿ, ಶಾಸಕ ಶೈಲೆಂದ್ರ ಬಿಲ್ದಾಳೆ, ವಿಧಾನ ಪರಿಷತ್ ಸದಸ್ಯ ಎಂ.ಜಿ.ಮುಳೆ ಹಾಗೂ ಮಾಜಿ ಶಾಸಕ ಪ್ರಕಾಶ್ ಖಂಡ್ರೆ ಸೇರಿದಂತೆ ಪಕ್ಷದ ಮುಖಂಡರು ಇದ್ದರು.