ಬೀದರ್ | ಪಹಲ್ಗಾಮ್ ಭಯೋತ್ಪಾದಕರ ದಾಳಿ ಖಂಡಿಸಿ ಮೇಣದಬತ್ತಿ ಹಿಡಿದು ಮೆರವಣಿಗೆ

ಬೀದರ್ : ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದಕರ ದಾಳಿ ಖಂಡಿಸಿ ಸೋಲಿಡರಿಟಿ ಯೂತ್ ಮೂವ್ಮೆಂಟ್ ಸಂಘಟನೆಯ ವತಿಯಿಂದ ಬಸವಕಲ್ಯಾಣ ನಗರದಲ್ಲಿ ಮೇಣದಬತ್ತಿ ಹಿಡಿದು ಮೆರವಣಿಗೆ ನಡೆಸಿ ಮೃತರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಗುರುವಾರ ರಾತ್ರಿ ನಗರದ ಜಾಮಿಯಾ ಮಸೀದಿಯಿಂದ ಹೊರಟ ಮೆರವಣಿಗೆಯು, ಮುಖ್ಯರಸ್ತೆಯ ಮೂಲಕ ಗಾಂಧಿ ವೃತ್ತ, ಬಸವೇಶ್ವರ್ ವೃತ್ತದಿಂದ ಸಾಗಿ ಅಂಬೇಡ್ಕರ್ ವೃತ್ತದವರೆಗೆ ತಲುಪಿತು.
ಸೋಲಿಡರಿಟಿ ಯೂತ್ ಮೂವ್ಮೆಂಟ್ ನ ಅಧ್ಯಕ್ಷ ಆಸದುಲ್ಲಾಹ ಖಾನ್ ಝಾಕಿ ಅವರು ಮಾತನಾಡಿದ ಅವರು, ನಮ್ಮ ಕೆಲವೊಂದು ರಾಜಕಾರಣಿಗಳು ತಮ್ಮ ರಾಜಕೀಯ ಹಿತಾಸಕ್ತಿಗೋಸ್ಕರ ಹಿಂದೂ ಧರ್ಮದವರನ್ನು ಬೇರೆ ಧರ್ಮದ ಜನರೊಂದಿಗೆ ಎತ್ತಿ ಕಟ್ಟುವ ಕೆಲಸ ಮಾಡುತ್ತಿದ್ದಾರೆ. ಈ ನೀಚ ರಾಜಕಾರಣ ನಡೆಯುವುದಿಲ್ಲ. ಇಂತಹ ರಾಜಕಾರಣ ಮಾಡುವುದಕ್ಕೆ ನಾವು ಬಿಡುವುದಿಲ್ಲ ಎಂದು ತಿಳಿಸಿದರು.
ಈ ಭಯೋತ್ಪಾದಕ ದಾಳಿಯ ಬಗ್ಗೆ ಸಮಗ್ರ ತನಿಖೆಯಾಗಬೇಕು. ಆ ಉಗ್ರರನ್ನು ಪತ್ತೆ ಹಚ್ಚಿ ಕಠಿಣ ಶಿಕ್ಷೆ ನೀಡಬೇಕು ಎನ್ನುವುದೇ ಬಸವಕಲ್ಯಾಣದ ಸೋಲಿಡರಿಟಿ ಯೂತ್ ಮೂವ್ಮೆಂಟ್ ಸಂಘಟನೆಯ ಒತ್ತಾಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಸೋಲಿಡರಿಟಿ ಯೂತ್ ಮೂವ್ಮೆಂಟ್ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ರಿಯಾಝ್ ಪಟೇಲ್, ಜಮಾತ್ ಇಸ್ಲಾಮಿ ಹಿಂದ್ ನ ಅಧ್ಯಕ್ಷ ಅಸ್ಲಮ್ ಜನಾಬ್, ನಗರ ಸಭೆ ಸದಸ್ಯ ಗಫರ್, ಗ್ರಾಮ ಕ್ರಾಂತಿ ಸೇನೆಯ ಅಧ್ಯಕ್ಷ ಸಂದೀಪ್ ಮುಕಿಂದೆ, ಎಸ್ಐಒ ಅಧ್ಯಕ್ಷ ಡಾ.ಝಬಿವುಲ್ಲಾ ಖಾನ್ ಹಾಗೂ ನಿತ್ಯಾನಂದ ಸೇರಿದಂತೆ ಅನೇಕ ಮಹಿಳೆಯರು, ಸಾರ್ವಜನಿಕರು ಉಪಸ್ಥಿತರಿದ್ದರು.