ಬೀದರ್ | ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವ ಅಗತ್ಯವಿದೆ : ಸುರೇಶ್ ಚನ್ನಶೆಟ್ಟಿ
ಬೀದರ್ : ಇಂದಿನ ಮಕ್ಕಳ ಬುದ್ಧಿಮತ್ತೆ ಚುರುಕಾಗಿದ್ದು, ನಮ್ಮ ಮಕ್ಕಳಿಗೆ ನಮ್ಮ ನಾಡಿನ ಕಲೆ, ಸಾಹಿತ್ಯ, ಸಂಸ್ಕೃತಿಯ ಜೊತೆಗೆ ಉತ್ತಮ ಸಂಸ್ಕಾರ ನೀಡುವ ಅಗತ್ಯವಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸುರೇಶ್ ಚನ್ನಶೆಟ್ಟಿ ಅವರು ಹೇಳಿದ್ದಾರೆ.
ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಚಿಟ್ಟಾ ವಲಯದ ಯುವ ಘಟಕ ಮತ್ತು ಕಲ್ಯಾಣ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಚಿಟ್ಟಾವಾಡಿ ಸರಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಏರ್ಪಡಿಸಿದ್ದ ಗೀತ ಗಾಯನ ಮತ್ತು ಹಾಸ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಮ್ಮ ನಾಡಿನ ಬಹು ಆಯಾಮದ ಪರಂಪರೆಯ ಕೊಂಡಿಗಳು ಕಳಚಿ ಬೀಳುತ್ತಿರುವ ಈ ಹೊತ್ತಿನಲ್ಲಿ ಮಕ್ಕಳಲ್ಲಿ ಸಂಸ್ಕಾರ ಎನ್ನುವುದು ನಶಿಸಿಹೋಗುತ್ತಿದೆ. ಹಿಂದೆ ಮನೆಗಳು ಚಿಕ್ಕದಾದರೂ ಮನೆ ತುಂಬ ಜನರಿರುತ್ತಿದ್ದರು. ಈಗ ಮನೆ ದೊಡ್ಡದಾದರೂ ಕುಟುಂಬಗಳು ಚಿಕ್ಕದಾಗಿವೆ. ಕೂಡು-ಕುಟುಂಬ ವ್ಯವಸ್ಥೆ ಮಾಯವಾಗಿರುವುದರಿಂದ ನಮ್ಮ ಕೌಟುಂಬಿಕ ಸಂಬಂಧಗಳು ದುರ್ಬಲಗೊಂಡಿವೆ, ಹೀಗಾಗಿ ನಮ್ಮ ಮಕ್ಕಳಿಗೆ ಅತ್ಯುತ್ತಮ ಸಂಸ್ಕಾರ ನೀಡುವ ಅಗತ್ಯತೆ ಹಿಂದೆಂದಿಗಿಂತ ಇಂದು ಅವಶ್ಯಕವಾಗಿದೆ ಎಂದರು.
ಕಾರ್ಯಕ್ರಮವನ್ನು ಚಿಟ್ಟಾ ಗ್ರಾಮ ಪಂಚಾಯತ್ ಅಧ್ಯಕ್ಷೆ ಸರಸ್ವತಿ ಘಾಳೆಪ್ಪ ಅವರು ಜಾನಪದ ಗೀತೆಯನ್ನು ಹಾಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮದ ಮುಖ್ಯ ಅತಿಥಿ ಕಿರುತೆರೆ ನಟಿ ರೋಶಿನಿ ಮಾಳಗೆ ಅವರು ಮಾತನಾಡಿ, ಕನ್ನಡಿಗರು ಕನ್ನಡ ಚಲನಚಿತ್ರಗಳನ್ನು ಮತ್ತು ಕಿರುತೆರೆ ಧಾರಾವಾಹಿಗಳನ್ನು ನೋಡುವ ಮೂಲಕ ಕಲಾವಿದರನ್ನು ಪ್ರೋತ್ಸಾಹಿಸಬೇಕೆಂದರು.
ಜಾನಪದ ಕಲಾವಿದರಾದ ಶಂಭುಲಿಂಗ್ ವಾಲದೊಡ್ಡಿ ಅವರು ಜಾನಪದ ಗೀತೆಗಳನ್ನು ಮತ್ತು ಆಶಾ ಕೋಟೆ ಅವರು ಚಿತ್ರಗೀತೆಗಳನ್ನು ಹಾಡಿದರು. ಹಾಸ್ಯ ಕಲಾವಿದ ರಘುಪ್ರಿಯ ಅವರು ಹಾಸ್ಯ ಕಾರ್ಯಕ್ರಮ ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಸಾಹಿತಿಗಳಾದ ರಘುನಾಥ್ ಹಡಪದ್, ಸಿದ್ದಮ್ಮ ಬಸಣ್ಣೋರ್, ಪ್ರಗತಿಪರ ರೈತರಾದ ಅದಿತಿ ಕಾಶಿಲಿಂಗ್ ಅಗ್ರಹಾರ್, ಬಿಎಸ್ಎಫ್ ಯೋಧರಾದ ಶಿವರಾಜ್ ಮದರಗಿಕರ್, ರಾಜೇಶಕುಮಾರ್ ಬಿರಾದಾರ್, ಶಿವಮೂರ್ತಿ ನಾಗಶೆಟ್ಟಿಕರ್, ಶಾಂತಪ್ಪ ಭೋಜಣ್ಣನವರನ್ನು ಸನ್ಮಾನಿಸಲಾಯಿತು.
ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ರಾಜ್ಯ ಸಂಚಾಲಕ ದಾನಿ ಬಾಬುರಾವ್, ಕಲ್ಯಾಣ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಶಿವಕುಮಾರ್ ತುಂಗಾ, ಚಿಟ್ಟಾ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪವನಕುಮಾರ್, ಪರಿಷತ್ ಗೌರವ ಕಾರ್ಯದರ್ಶಿ ಶಿವಕುಮಾರ್ ಕಟ್ಟೆ, ರಮೇಶ್ ಬಿರಾದಾರ್, ಗುರುನಾಥ್ ರಾಜಗಿರಾ, ವೀರೇಶ್ ಸ್ವಾಮಿ, ಆಕಾಶ್ ಕೋಟೆ ಮತ್ತಿತರರು ಉಪಸ್ಥಿತರಿದ್ದರು.