ಬೀದರ್ | ಅಮಿತ್ ಶಾ ರಾಜೀನಾಮೆಗೆ ದಲಿತ ಸಂಘರ್ಷ ಸಮಿತಿ ಒತ್ತಾಯ
ಬೀದರ್ : ಅಂಬೇಡ್ಕರ್ ಅವರನ್ನು ಅವಹೇಳನ ಮಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಾಜೀನಾಮೆ ನೀಡಬೇಕು ಎಂದು ದಲಿತ ಸಂಘರ್ಷ ಸಮಿತಿ (ಪ್ರೋ.ಬಿ. ಕೃಷ್ಣಪ್ಪ ಸ್ಥಾಪಿತ) ಒತ್ತಾಯಿಸಿದೆ.
ಔರಾದ್ ತಹಶೀಲ್ದಾರ್ ಮೂಲಕ ರಾಷ್ಟ್ರಪತಿಯವರಿಗೆ ಮನವಿಪತ್ರದಲ್ಲಿ ಸಲ್ಲಿಸಿದ ನಂತರ ಮಾತನಾಡಿದ ಪ್ರತಿಭಟನಾನಿರತರು, ಡಿ.17ರಂದು ರಾಜ್ಯಸಭೆ ಸಂಸತ್ತಿನಲ್ಲಿ ಅಮಿತ್ ಶಾ ಡಾ.ಅಂಬೇಡ್ಕರ್ ಅವರ ಬಗ್ಗೆ ಅತ್ಯಂತ ಹಗುರವಾಗಿ ಮಾತನಾಡಿದ್ದಾರೆ. ಅವರ ನಾಲಿಗೆ ಮೇಲೆ ಹಿಡಿತವಿಲ್ಲದೆ ಮಾತನಾಡಿದ್ದು, ಅಂಬೇಡ್ಕರ್ ಮತ್ತು ಸಂವಿಧಾನವನ್ನು ಗೌರವಿಸುವುದಿಲ್ಲ ಎನ್ನುವುದು ಸಾಬಿತಾಗಿದೆ. ಅವರು ಸಂವಿಧಾನದ ಸ್ಥಳದಲ್ಲಿ ಮನುಸ್ಮೃತಿ ಮತ್ತು ಅರ್ ಎಸ್ ಎಸ್ ಸಂಘ ಪರಿವಾರದ ಸಿದ್ಧಾಂತವನ್ನು ತರಲು ಹೊರಟಿದ್ದಾರೆ. ಇದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ ಎಂದು ಆಕ್ರೋಶ ಹೊರಹಾಕಿದರು.
ಅಮಿತ್ ಶಾ ಅವರು ಸಂಸತ್ತಿನಲ್ಲಿ ಮಾತನಾಡುವ ವೇಳೆ ಡಾ.ಅಂಬೇಡ್ಕರ್ ಅವರ ಹೆಸರು ಹೇಳುವುದು ಇತ್ತೀಚಿನ ದಿನಗಳಲ್ಲಿ ಫ್ಯಾಷನ್ ಆಗಿದೆ. ಅಂಬೇಡ್ಕರ್, ಅಂಬೇಡ್ಕರ್ ಎನ್ನುವುದರ ಬದಲು ದೇವರ ಹೆಸರು ಹೇಳಿದರೆ ಏಳೇಳು ಜನುಮದಲ್ಲೂ ಸ್ವರ್ಗ ಪ್ರಾಪ್ತಿಯಾಗುತ್ತಿತ್ತು ಎಂದು ಹೇಳುವ ಮೂಲಕ ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದ್ದಾರೆ. ಇಂತಹ ಹೇಳಿಕೆ ನೀಡಿರುವ ಅವರಿಗೆ ಗೃಹಮಂತ್ರಿ ಸ್ಥಾನದಲ್ಲಿ ಮುಂದುವರೆಯುವ ಯಾವ ನೈತಿಕತೆಯು ಇರುವುದಿಲ್ಲ. ನಾಲಿಗೆ ಹರಿಬಿಟ್ಟಿರುವ ಅಮಿತ್ ಶಾ ದೇಶದ ಜನತೆಗೆ ಕ್ಷಮೆ ಕೇಳಬೇಕು. ಹಾಗೆಯೇ ಕೇಂದ್ರ ಸರ್ಕಾರ ಅವರಿಂದ ರಾಜೀನಾಮೆ ಪಡೆದು ಕಾನೂನಿನ ಪ್ರಕಾರ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕ ಧನರಾಜ್ ಮುಸ್ತಾಪುರ್ ಹಾಗೂ ತಾಲೂಕು ಸಂಚಾಲಕ ಜೈ ಪ್ರಕಾಶ್ ಅಷ್ಟುರೆ ಸೇರಿದಂತೆ ಹಲವರು ಭಾಗವಹಿಸಿದ್ದರು.