ಬೀದರ್ | ಮಹಾತ್ಮರ ಜಯಂತಿ ಆಚರಿಸದೆ ಅವಮಾನ ಮಾಡುವ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹ

ಬೀದರ್ : ಎಲ್ಲಾ ಸಮುದಾಯದ ಮಹಾತ್ಮರ ಜಯಂತಿಯನ್ನು ಆಚರಣೆ ಮಾಡದೇ ಅವರನ್ನು ಅವಮಾನ ಮಾಡುವ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸಿ, ತಕ್ಷಣವೇ ವಜಾಗೊಳಿಸಬೇಕು ಎಂದು ವಿವಿಧ ಸಂಘಟನೆಗಳು ಆಗ್ರಹ ಮಾಡಿವೆ.
ಇಂದು ಹುಮನಾಬಾದ್ ತಹಶೀಲ್ದಾರ್ ಅವರಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ, ಅಧಿಕಾರಿಗಳು ಹಲವು ಸಮುದಾಯದ ಮಹಾತ್ಮರ ಜಯಂತಿ ಆಚಾರಣೆ ಮಾಡದೇ ವಿಳಂಬ ಮಾಡುವುದಲ್ಲದೆ, ಕೆಲ ಅಧಿಕಾರಿಗಳು ಮಹಾತ್ಮರ ಜಯಂತಿಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸುತ್ತಿದ್ದಾರೆ ಎಂದು ದೂರಿದ್ದಾರೆ.
ಈ ವಿಷಯದ ಬಗ್ಗೆ ಇದಕ್ಕಿಂತ ಮೊದಲು ತಮ್ಮ ಗಮನಕ್ಕೆ ತಂದಿದ್ದೇವೆ. ತಾವು ನೋಟಿಸ್ ಜಾರಿ ಮಾಡುವ ಮುಖಾಂತರ ಅವರ ಮೇಲೆ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಿರಿ. ಆದರೆ ಇಲ್ಲಿಯವರೆಗೆ ಹಲವು ಅಧಿಕಾರಿಗಳು ಈ ವಿಷಯ ಪರಿಗಣಿಸದೇ ಪದೇ ಪದೇ ಮಹಾತ್ಮರನ್ನು ಅವಮಾನಿಸುತ್ತಿದ್ದಾರೆ. ಹಾಗೆಯೇ ಜಯಂತಿ ಮುಗಿದ ನಂತರ ಮಹಾಪುರುಷರ ಭಾವಚಿತ್ರ ಕಚೇರಿಯ ಒಂದು ಮೂಲೆಯಲ್ಲಿ ಇಟ್ಟು ಅವಮಾನಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಮಹಾಪುರುಷರ ಜಯಂತಿ ಆಚರಿಸದೆ ಹಾಗೂ ಅವರನ್ನು ಅವಮಾನ ಮಾಡುತ್ತಿರುವ ಅಧಿಕಾರಿ ವಿರುದ್ಧ ಸೂಕ್ತವಾದ ಕಠಿಣ ಕ್ರಮ ಕೈಗೊಳ್ಳಬೇಕು. ಒಂದು ವೇಳೆ ಅವರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ, ಎಲ್ಲಾ ಸಮುದಾಯದ ನಾಯಕರ ಸಮ್ಮುಖದಲ್ಲಿ ಕಚೇರಿ ಮುಂದೆ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಕನ್ನಡ ಸೈನ್ಯ ಜಿಲ್ಲಾಧ್ಯಕ್ಷ ಸುಭಾಷ್ ಕೆನಡೆ, ವೀರಶೈವ ಲಿಂಗಾಯತ ಸಂಘಟನೆಯ ಜಿಲ್ಲಾಧ್ಯಕ್ಷ ಸುನಿಲ್ ಪತ್ರಿ, ಭಾರತೀಯ ದಲಿತ್ ಪ್ಯಾಂಥರ್ ತಾಲ್ಲೂಕು ಅಧ್ಯಕ್ಷ ಗಣಪತಿ ಅಷ್ಟೂರೆ, ದಲಿತ ಮಾದಿಗ ಸಮನ್ವಯ ಸಮಿತಿ ತಾಲ್ಲೂಕು ಅಧ್ಯಕ್ಷ ಪಪುರಾಜ್ ಚತುರೆ, ಸೋಮನಾಥ್ ಮಡಿವಾಳ್, ದತ್ತು ಕೋಳಾರೆ, ರೆಡ್ಡಿ ಸಮುದಾಯದ ಮುಖಂಡ ಹರೀಶ್ ರೆಡ್ಡಿ, ಸೋಮನಾಥ್ ಸ್ವಾಮಿ, ದೇವಿ ಉಪ್ಪಾರ್, ಅನಿಲ್ ದೊಡ್ಡಿ, ಅವಿನಾಶ್ ಪೋಲದಾಸ್ ಹಾಗೂ ಕನ್ನಡ ಸೈನ್ಯ ಮಹಿಳಾ ಘಟಕದ ಜಿಲ್ಲಾಧ್ಯಕ್ಷ ಶಕುಂತಲಾ ಬಿರಾದಾರ್ ಸೇರಿದಂತೆ ಇತರರು ಭಾಗವಹಿಸಿದ್ದರು.