ಬೀದರ್ | ಅಂಬೇಡ್ಕರ್ ಪ್ರತಿಮೆಗೆ ಅವಮಾನ ಮಾಡಿರುವ ಕಿಡಿಗೇಡಿಗಳನ್ನು ಗಡಿಪಾರು ಮಾಡಲು ಆಗ್ರಹ
ಬೀದರ್ : ವಿಳಾಸಪುರ ಗ್ರಾಮದಲ್ಲಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಮೂರ್ತಿಗೆ ಆವಮಾನ ಮಾಡಿರುವ ಕೀಡಿಗೇಡಿಗಳನ್ನು ಕೂಡಲೇ ಬಂಧಿಸಿ ಕಠಿಣ ಕ್ರಮ ಕೈಗೊಂಡು ಗಡಿಪಾರು ಮಾಡಬೇಕೆಂದು ದಲಿತ ಸಂಘಟನೆಗಳ ಒಕ್ಕೂಟ ಒತ್ತಾಯಿಸಿದೆ.
ಶುಕ್ರವಾರ ವಿಳಾಸಪುರ ಗ್ರಾಮದಲ್ಲಿ ಅಂಬೇಡ್ಕರ್ ಪ್ರತಿಮೆಗೆ ಚಪ್ಪಲಿ ಹಾರ ಹಾಕಿ ಅವಮಾನ ಮಾಡಲಾಗಿತ್ತು. ಇದನ್ನು ಖಂಡಿಸಿ ನಗರದಲ್ಲಿ ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ವಿಳಾಸಪುರ ಗ್ರಾಮದಲ್ಲಿ ಕಳೆದ 15-20 ವರ್ಷಗಳಿಂದ ಅಂಬೇಡ್ಕರ್ ಭವನದ ಜಾಗದಲ್ಲಿ ಪ್ರತಿ ವರ್ಷ ಡಾ.ಅಂಬೇಡ್ಕರ್ ಜಯಂತಿ ಹಾಗೂ ಮಹಾ ಪರಿನಿಬ್ಬಾಣ ದಿನ ನಡೆಯುತ್ತ ಬಂದಿರುತ್ತವೆ. ಕೆಲ ದಿನಗಳ ಹಿಂದೆ ಈ ಗ್ರಾಮದಲ್ಲಿ ಕೆಲವು ಕಿಡಿಗೇಡಿಗಳು ಬಾಬಾಸಾಹೇಬರ ನೀಲಿ ಧ್ವಜವನ್ನು ಎಸೆದಿದ್ದರು. ಈ ಘಟನೆಯ ಮರೆ ಮಾಚುವಷ್ಟರಲ್ಲಿ ಕಿಡಿಗೇಡಿಗಳು ಅಂಬೇಡ್ಕರ್ ಭಾವಚಿತ್ರಕ್ಕೆ ಅವಮಾನ ಮಾಡಿರುವದನ್ನು ದಲಿತ ಸಂಘಟನೆಗಳ ಒಕ್ಕೂಟ ತೀವ್ರವಾಗಿ ಖಂಡಿಸುತ್ತದೆ. ಶಾಂತಿ ಭಂಗ ಮಾಡುತ್ತಿರುವ ಇಂಥಹ ಕಿಡಿಗೇಡಿಗಳನ್ನು 24 ಗಂಟೆಯ ಒಳಗೆ ಬಂಧಿಸಿ ಗಡೀಪಾರು ಮಾಡಬೇಕೆಂದು ಆಗ್ರಹಿಸಲಾಗಿದೆ.
ಜಿಲ್ಲೆಯಲ್ಲಿರುವ ಎಲ್ಲ ಅಂಬೇಡ್ಕರ್ ಪ್ರತಿಮೆಗಳ ಹತ್ತಿರ ಸಿಸಿ ಕ್ಯಾಮೆರಾ ಅಳವಡಿಸುವ ಮೂಲಕ ಮುಂದೆ ಈ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು ಎಂದು ಜಿಲ್ಲಾಡಳಿತಕ್ಕೆ ಒತ್ತಾಯಿಸಲಾಯಿತು.
ಈ ಸಂದರ್ಭದಲ್ಲಿ ಸಂವಿಧಾನ ಸಂರಕ್ಷಣ ಸಮಿತಿಯ ಸಂಚಾಲಕ ಅಬ್ದುಲ್ ಮನ್ನಾನ್ ಸೇಠ್, ಬಸವರಾಜ್ ಮಾಳಗೆ, ಸಂವಿಧಾನ ಸಂರಕ್ಷಣ ಸಮಿತಿಯ ಮಹಾಪ್ರಧಾನ ಕಾರ್ಯದರ್ಶಿ ಅನಿಲಕುಮಾರ್ ಬೆಲ್ದಾರ್, ಅಂಬೇಡ್ಕರವಾದ ರಾಜ್ಯ ಸಂಘಟನಾ ಸಂಚಾಲಕ ರಮೇಶ್ ಡಾಕುಳಗಿ, ದಲಿತ್ ಸೇನೆ ಜಿಲ್ಲಾಧ್ಯಕ್ಷ ಶ್ರೀಪತರಾವ್ ದೀನೆ, ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಬಾಬು ಪಾಸ್ವಾನ್ ಸೇರಿದಂತೆ ನೂರಾರು ಜನರು ಭಾಗವಹಿಸಿದರು.