ಬೀದರ್ | ಕಿರುಕುಳದ ಸುಳ್ಳು ಆರೋಪ ಮಾಡಿದ ಮಹಿಳಾ ಸ್ವಚ್ಛತಾ ಕರ್ಮಿಗಳ ವಿರುದ್ಧ ಕ್ರಮ ಕೈಗೊಳ್ಳಲು ಒತ್ತಾಯ

ಬೀದರ್ : ನಗರದ ಬ್ರಿಮ್ಸ್ ಬೋಧಕ ಆಸ್ಪತ್ರೆಯ ಪ್ರಥಮ ದರ್ಜೆ ಸಹಾಯಕ ಹಾಗೂ ಪ್ರಭಾರಿ ಸ್ವಚ್ಛತಾ ಮೇಲ್ವಿಚಾರಕರಾಗಿ ಸೇವೆ ಸಲ್ಲಿಸುತ್ತಿರುವ ಪ್ರಕಾಶ ಮಾಳಗೆ ವಿರುದ್ಧ ಮಾನಸಿಕ ಮತ್ತು ದೈಹಿಕ ಕಿರುಕುಳದ ಸುಳ್ಳು ಆರೋಪ ಮಾಡಿದ 6 ಜನ ಮಹಿಳಾ ಸ್ವಚ್ಛತಾಕರ್ಮಿ ಹಾಗೂ ಅವರಿಗೆ ಕುಮ್ಮಕ್ಕು ನೀಡುತ್ತಿರುವವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ವಿವಿಧ ದಲಿತ ಸಂಘಟನೆಗಳು ಒತ್ತಾಯಿಸಿವೆ.
ಇಂದು ಬ್ರಿಮ್ಸ್ ನ ನಿರ್ದೇಶಕರಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ, ಪ್ರಕಾಶ್ ಮಾಳಗೆ ಅವರು ಪ್ರಾಮಾಣಿಕ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಮೇಲೆ ಮಹಿಳಾ ಸ್ವಚ್ಛತಾಕರ್ಮಿಗಳು ಮಾನಸಿಕ ಮತ್ತು ದೈಹಿಕ ಕಿರುಕುಳದ ಸುಳ್ಳು ಆರೋಪ ಮಾಡಿ, ಅವರ ತೆಜೋವಧೆ ಮಾಡಲು ಷಡ್ಯಂತ್ರ ರೂಪಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಘಟನೆಯಿಂದ ತೀವ್ರವಾಗಿ ನೊಂದ ಪ್ರಕಾಶ್ ಮಾಳಗೆ ಅವರು ಮಾನಸಿಕ ಹಾಗೂ ದೈಹಿಕವಾಗಿ ಕುಗ್ಗಿದ್ದಾರೆ. ಹಾಗಾಗಿ ಮಹಿಳಾ ಸ್ವಚ್ಛತಾಕರ್ಮಿಗಳನ್ನು ಸೇವೆಯಿಂದ ವಜಾಗೊಳಿಸಬೇಕು. ಅವರನ್ನು ಹಾಗೂ ಅವರಿಗೆ ಕುಮ್ಮಕ್ಕು ನೀಡುತ್ತಿರುವವರನ್ನು ತೀವ್ರ ವಿಚಾರಣೆಗೆ ಒಳಪಡಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿದೆ.
ನಮ್ಮ ಮನವಿಗೆ 3 ದಿನಗಳಲ್ಲಿ ಸ್ಪಂದಿಸದಿದ್ದರೆ, ನಿಮ್ಮ ವಿರುದ್ಧ ಪೋಲಿಸ್ ಠಾಣೆಯಲ್ಲಿ ದೂರು ಸಲ್ಲಿಸಿ, ತೀವ್ರವಾದ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಲಾಗಿದೆ.
ಈ ಸಂದರ್ಭದಲ್ಲಿ ದಲಿತ ಸೇನೆ ರಾಜ್ಯ ಉಪಾಧ್ಯಕ್ಷ ಚಂದ್ರಕಾಂತ್ ನಿರಾಟೆ, ದಸಂಸ ರಾಜ್ಯ ಉಪಾಧ್ಯಕ್ಷ ರಾಜಕುಮಾರ್ ಮೂಲಭಾರತಿ, ಕಲ್ಯಾಣ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಶಿವಕುಮಾರ್ ತುಂಗಾ, ಅಂಬೇಡ್ಕರ್ ಯುವ ಸೇನೆಯ ಜಿಲ್ಲಾಧ್ಯಕ್ಷ ನಿತೀಶ್ ಉಪ್ಪೆ, ಭೀಮ ಟೈಗರ್ ಸೇನೆಯ ಜಿಲ್ಲಾಧ್ಯಕ್ಷ ನರಸಿಂಗ್ ಸಾಮ್ರಾಟ, ಭೀಮ ಆರ್ಮಿ ಜಿಲ್ಲಾಧ್ಯಕ್ಷ ಅಂಬ್ರೀಶ್ ಕುದರೆ, ಕ.ದ.ಸಂ.ಸ. ಪರಿವರ್ತನಾವಾದ ಜಿಲ್ಲಾಧ್ಯಕ್ಷ ಅಂಬೇಡ್ಕರ್ ಬೌದ್ಧೆ, ಜೈಭೀಮ ಘರ್ಜನೆ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ರಾಹುಲ್ ಡಾಂಗೆ, ಕನ್ನಡ ಸಮರ ಸೇನೆಯ ಜಿಲ್ಲಾಧ್ಯಕ್ಷ ಅವಿನಾಶ್ ದೀನೆ ಹಾಗೂ ಜೈ ಕನ್ನಡಿಗರ ಸೇನೆ (ಯುವಶಕ್ತಿ)ಯ ಜಿಲ್ಲಾಧ್ಯಕ್ಷ ಭಗತ್ ಸಿಂಧೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.