ಬೀದರ್ | ಭಾಷೆಯಲ್ಲಿ ಸೃಜನಾತ್ಮಕತೆ ಬೆಳೆಸಿಕೊಳ್ಳಿ : ಭಾರತಿ ವಸ್ತ್ರದ್
ಬೀದರ್ : ವಿದ್ಯಾರ್ಥಿಗಳು ಭಾಷೆಯಲ್ಲಿ ಸೃಜನಾತ್ಮಕತೆ ಬೆಳೆಸಿಕೊಳ್ಳಬೇಕು ಎಂದು ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷೆ ಭಾರತಿ ವಸ್ತ್ರದ್ ಹೇಳಿದ್ದಾರೆ.
ನಗರದ ಜೀಜಾಮಾತಾ ಕನ್ಯಾ ಪ್ರೌಢಶಾಲೆಯಲ್ಲಿ ಕರ್ನಾಟಕ ಲೇಖಕಿಯರ ಸಂಘದ ವತಿಯಿಂದ ಶುಕ್ರವಾರ ಆಯೋಜಿಸಿದ್ದ 'ವಿದ್ಯಾರ್ಥಿಗಳೊಂದಿಗೆ ನಾವು' ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಾಹಿತ್ಯದ ಬೆಳವಣಿಗೆಗೆ ಭಾಷೆ ಬಗ್ಗೆ ಹೆಚ್ಚು ಕಾಳಜಿ ವಹಿಸುವುದು ಅವಶ್ಯಕ. ಪಠ್ಯ ಪುಸ್ತಕ ಹಾಗೂ ಸಾಹಿತ್ಯಕ್ಕೆ ಸಂಬಂಧಿಸಿದ ಕೃತಿಗಳ ಅಧ್ಯಯನದಿಂದ ಕತೆ, ಕವನಗಳ ರಚನೆ ಸುಲಭವಾಗುತ್ತದೆ. ಪದ್ಯ, ಗದ್ಯದ ಸೃಷ್ಟ ಓದು, ನೀತಿ ಕತೆ, ಕವನ ರಚನೆ ಬಗ್ಗೆ ವಿದ್ಯಾರ್ಥಿಗಳಲ್ಲಿ ಆಸಕ್ತಿ ಹುಟ್ಟಿಸಲು ಶಾಲೆಗಳಲ್ಲಿ ʼವಿದ್ಯಾರ್ಥಿಗಳೊಂದಿಗೆ ನಾವುʼ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಸಾಹಿತಿ ಪಾರ್ವತಿ ಸೋನಾರೆ ಅವರು ಮಾತನಾಡಿ, ನಿತ್ಯ ನಮ್ಮ ಸುತ್ತಮುತ್ತ ನಡೆಯುವ ಘಟನೆಗಳ ಬಗ್ಗೆಯೂ ಮಕ್ಕಳು ಕತೆ ಬರೆಯಬಹುದು ಎಂದು ತಿಳಿಸಿದರು.
ಡಾ.ಶ್ರೇಯಾ ಮಹೇಂದ್ರಕರ್ ಅವರು, ಶಿಶು ಪ್ರಾಸ ಗೀತೆ ಬರೆಯುವ ಬಗ್ಗೆ ತಿಳಿಸಿಕೊಟ್ಟರು. ಗೀತೆಗಳನ್ನು ಪ್ರಾಸ ಬದ್ಧವಾಗಿ ಬರೆಯಲು ಶಬ್ದ ಭಂಡಾರ ಹೇಗೆ ನೆರವಾಗುತ್ತದೆ ಎನ್ನುವುದನ್ನು ಮನವರಿಕೆ ಮಾಡಿದರು. ಸ್ವತಃ ಕವನ ರಚಿಸಿ, ಮಕ್ಕಳಿಂದ ಓದಿಸಿದರು.
ವಿವಿಧ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಅಂಚೆ ಇಲಾಖೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಮಂಗಲಾ ಭಾಗವತ್ ಬಹುಮಾನ ವಿತರಿಸಿದರು. ಶಾಲೆಯ ಮುಖ್ಯಶಿಕ್ಷಕ ಪರಮೇಶ್ವರ್ ಬಿರಾದಾರ್ ಅವರು ಉದ್ಘಾಟಿಸಿದರು.
ಪದ್ಯ ಹೇಳುವ ಸ್ಪರ್ಧೆಯಲ್ಲಿ ಸಂಜನಾ ಪ್ರೇಮದಾಸ (ಪ್ರಥಮ), ಸ್ಪಷ್ಟ ಓದು ಸ್ಪರ್ಧೆಯಲ್ಲಿ ಅಮರ ಹಣಮಂತ (ಪ್ರಥಮ), ಕಥಾ ವಾಚನದಲ್ಲಿ ಮೇಘಾ ಶಿವಾನಂದ (ಪ್ರಥಮ) ಬಹುಮಾನ ಗಳಿಸಿದರು. ಶಿಕ್ಷಕರಾದ ವಾಸುದೇವ್ ರಾಠೋಡ್, ಅರ್ಜುನ್ ಧೂಳೆ ಮತ್ತಿತರರು ಉಪಸ್ಥಿತರಿದ್ದರು.