ಬೀದರ್ | ಬಸವಜ್ಯೋತಿ ಪಾದಯಾತ್ರೆಗೆ ಚಾಲನೆ
ಬೀದರ್ : ಡಾ.ಚನ್ನಬಸವ ಪಟ್ಟದ್ದೇವರ 135ನೇ ಜಯಂತ್ಯೋತ್ಸವ ನಿಮಿತ್ತ ಬಸವಜ್ಯೋತಿ ಪಾದಯಾತ್ರೆಗೆ ಅಪರ ಜಿಲ್ಲಾಧಿಕಾರಿ ಶಿವಕುಮಾರ್ ಶೀಲವಂತ ಚಾಲನೆ ನೀಡಿದರು.
ಗುರುವಾರ ಕಮಲನಗರ ಪಟ್ಟಣದ ಶಾಖಾ ಮಠದಲ್ಲಿ ಪಾದಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಅವರು, ಕಗ್ಗತ್ತಲೆ ನಾಡಿನಲ್ಲಿ ಕನ್ನಡದ ಜ್ಯೋತಿ ಬೆಳಗಿಸಿದ ಕೀರ್ತಿ ಭಾಲ್ಕಿ ಹಿರೇಮಠದ ಲಿಂಗೈಕ್ಯ ಡಾ.ಚನ್ನಬಸವ ಪಟ್ಟದ್ದೇವರಿಗೆ ಸಲ್ಲುತ್ತದೆ. ಅವರು ಬಸವ ತತ್ವದ ಬೆಳಕು ಮತ್ತು ಬಸವಕಲ್ಯಾಣದಲ್ಲಿ ನೂತನ ಅನುಭವ ಮಂಟಪದ ಶಿಲ್ಪಿಗಳಾಗಿದ್ದರು. ಅವರು ಸಾಮಾಜಿಕ ಮೌಡ್ಯತೆಗಳನ್ನು ಅಲ್ಲಗಳೆದರು. ಕಾಯಕಕ್ಕೆ ದಾಸೋಹದ ಚೌಕಟ್ಟು ಹಾಕಿದರು. ದಾನದ ಬದಲು ದಾಸೋಹ ತತ್ವವನ್ನು ಉಸಿರಾಗಿಸಿಕೊಂಡು ಶಿಕ್ಷಣದ ಮೂಲಕ ಜ್ಞಾನವನ್ನು ಪಸರಿಸುವ ಕಾರ್ಯ ಕೈಗೊಂಡರು ಎಂದು ಹೇಳಿದರು.
ಕಾರ್ಯಕ್ರಮದ ಸಾನಿಧ್ಯ ವಹಿಸಿದ ಬಸವಕಲ್ಯಾಣದ ಅನುಭವ ಮಂಟಪದ ಅಧ್ಯಕ್ಷ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು ಮಾತನಾಡಿ, ಚನ್ನಬಸವ ಪಟ್ಟದ್ದೇವರ ಶಕ್ತಿ, ಬಸವಣ್ಣನವರ ಕಾಯಕ ಮತ್ತು ದಾಸೋಹ ತತ್ವಗಳು ಪ್ರತಿಫಲದಿಂದ ಕಲ್ಯಾಣ ನಾಡು ಶೈಕ್ಷಣಿಕ, ಸಾಮಾಜಿಕ ಮತ್ತು ಧಾರ್ಮಿಕ ಕ್ಷೇತ್ರದಲ್ಲಿ ಸಾಕಷ್ಟು ಬೆಳವಣಿಗೆ ಕಂಡಿವೆ. ಸಮಾಜದಲ್ಲಿನ ದುಶ್ಚಟಗಳನ್ನು ದೂರ ಮಾಡುವ ಮೂಲಕ ಸಾಮಾಜಿಕ ಮತ್ತು ಧಾರ್ಮಿಕ ಕಾರ್ಯಗಳಲ್ಲಿ ಸಾಕ್ಷಾತ್ ಶರಣರ ವ್ಯಕ್ತಿತ್ವವನ್ನು ಕಂಡ ಮಹಾನ ಸಂತ ಅವರು ಎಂದು ಪಟ್ಟದೇವರ ವ್ಯಕ್ತಿತ್ವವನ್ನು ತಿಳಿಸಿದರು.
ಭಾಲ್ಕಿ ಹಿರೇಮಠದ ಪೀಠಾಧಿಕಾರಿ ಗುರುಬಸವಪಟ್ಟದ್ದೇವರು, ತಹಶೀಲ್ದಾರ್ ಅಮಿತ್ ಕುಮಾರ್ ಕುಲಕರ್ಣಿ ಷಟಸ್ಥಲ ದ್ವಜಾರೋಹಣ ನೆರವೇರಿಸಿದರು. ಬಸವ ಜ್ಯೋತಿ ಪಾದಯಾತ್ರೆಯು ಲಿಂಗೈಕ್ಯ ಪಟ್ಟದ್ದೇವರ ಭಾವಚಿತ್ರ ಹೊತ್ತು ಶಾಖಾ ಮಠದಿಂದ ಆರಂಭಗೊಂಡಿತ್ತು.