ಬೀದರ್ | ವಿದ್ಯುಚ್ಛಕ್ತಿ ಕೂಡ ಖಾಸಗಿಕರಣದತ್ತ ಸಾಗುತ್ತಿದೆ : ಚಂದ್ರಶೇಖರ್ ಕೋಡಿಹಳ್ಳಿ

ಬೀದರ್ : ವಿದ್ಯುಚ್ಛಕ್ತಿ ಕೂಡ ಖಾಸಗಿಕರಣದತ್ತ ಸಾಗುತ್ತಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಚಂದ್ರಶೇಖರ್ ಕೋಡಿಹಳ್ಳಿ ಅವರು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲೆಯ ರೈತರ ಜ್ವಲಂತ ಸಮಸ್ಯೆಗಳು ಬಗೆಹರಿಸುವಂತೆ ಇಂದು ನಗರದ ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ರೈತರು ಪ್ರತಿಭಟಣಾ ಮೆರವಣಿಗೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ವಿದ್ಯುಚ್ಛಕ್ತಿ ಖಾಸಗೀಕರಣ ಆಗುತ್ತಿದೆ. ಸ್ಮಾರ್ಟ್ ಮೀಟರನ್ನು ತರಾತುರಿಯಲ್ಲಿ ಕೂರಿಸುತ್ತಿದ್ದಾರೆ. ಇದರಿಂದಾಗಿ ರೈತರು ಹೊಸದಾಗಿ ಕೃಷಿ ಪಂಪಸೆಟ್‌ಗಳನ್ನ ಅಳವಡಿಸಲು ವಿದ್ಯುತ್ ನೋಂದಣಿಗಾಗಿ 50 ರಿಂದ 60 ಸಾವಿರ ರೂ. ಖರ್ಚಾಗುತ್ತಿದ್ದು, ಇದನ್ನು ಮೊದಲಿನಂತೆ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
ಇಂಧನ ಇಲಾಖೆಯಲ್ಲಿ ವ್ಯಾಪಾರ ಮಾಡುತ್ತಿದ್ದೀರೋ ಅಥವಾ ಸೇವೆ ಮಾಡುತ್ತಿದ್ದಿರೋ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಅವರನ್ನು ಪ್ರಶ್ನಿಸಿದ ಅವರು, ವ್ಯಾಪಾರ ಮಾಡುವವರನ್ನು ನಿಯಂತ್ರಿಸಬೇಕು. ಇಲ್ಲದಿದ್ರೆ ಮೋಟಾರ್ ಕಿತ್ತು ಬಿಸಾಕುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಜಿಲ್ಲಾಧಿಕಾರಿ ಮುಖಾಂತರ ಮುಖ್ಯಮಂತ್ರಿಗಳಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ, ಜಿಲ್ಲೆಯ ರೈತರು ಪ್ರತಿ ವರ್ಷ ಹಲವಾರು ಸಮಸ್ಯೆಗಳಿಗೆ ಸಿಲುಕಿ ನರಳಾಡುತ್ತಿದ್ದು, ಸರ್ಕಾರ ಆ ಸಮಸ್ಯೆಗಳಿಗೆ ಸ್ಪಂದಿಸಿ ಅತೀ ಶೀಘ್ರದಲ್ಲಿ ಬಗೆಹರಿಬೇಕು. ಬೆಳೆ ವಿಮೆ ಮಾಡಿಸಿದ ರೈತರ ಬೆಳೆ ಹಾಳಾದರೂ ಕೂಡ ಇಲ್ಲಿವರೆಗೆ ಬೆಳೆ ವಿಮೆ ಪರಿಹಾರ ಸಿಗಲಿಲ್ಲ. ಶೀಘ್ರದಲ್ಲಿಯೇ ಪರಿಹಾರ ಸಿಗುವಂತೆ ಮಾಡಬೇಕು. ಪ್ರಸಕ್ತ ಸಾಲಿನಲ್ಲಿ ಮಂಜಿನಿಂದ ತೊಗರಿ ಬೆಳೆ ಸಂಪೂರ್ಣ ಹಾಳಾಗಿದ್ದು, ಎಕರೆಗೆ 25 ಸಾವಿರ ರೂ. ಯಂತೆ ಬೆಳೆ ಹಾನಿ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.
2020ರ ಕೊರೊನಾ ಸಮಯದಲ್ಲಿ ಕೇಂದ್ರ ಸರ್ಕಾರ 3 ಕೃಷಿ ವಿರೋಧಿ ಕಾಯ್ದೆ ಜಾರಿಗೆ ತಂದಿತ್ತು. ಅದೇ ಪ್ರಕಾರ ರಾಜ್ಯದಲ್ಲಿ ಕೂಡ ಅಂದಿನ ಸರ್ಕಾರ ಆ ಕಾಯ್ದೆ ಜಾರಿ ಮಾಡಿತ್ತು. ಈವಾಗ ಕೇಂದ್ರ ಸರ್ಕಾರ ಕೃಷಿ ಕಾಯ್ದೆ ವಾಪಸ್ಸು ತೆಗೆದುಕೊಂಡಿದ್ದರೂ ಕೂಡ ನಮ್ಮ ರಾಜ್ಯ ಸರ್ಕಾರ ವಾಪಸ್ಸು ಪಡೆದಿಲ್ಲ. ಆ ಕೃಷಿ ವಿರೋಧಿ ಕಾಯ್ದೆಗಳು ರಾಜ್ಯದಲ್ಲಿಯು ಕೂಡ ವಾಪಸ್ಸು ಪಡೆಯಬೇಕು ಎಂದಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಸಿದ್ರಾಮಪ್ಪಾ ಆಣದೂರೆ, ಜಿಲ್ಲಾ ಕಾರ್ಯಾಧ್ಯಕ್ಷ ಶ್ರೀಮಂತ್ ಬಿರಾದಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಯಾನಂದ್ ಸ್ವಾಮಿ, ಮಾಲನಗೌಡ ಪಾಟೀಲ್ ಹಾಗೂ ದಲಿತ ಮುಖಂಡ ಬಸವರಾಜ್ ಸಾಸನೂರ್ ಸೇರಿದಂತೆ ಅನೇಕ ರೈತರು ಮತ್ತು ದಲಿತ ಸಂಘಟನೆಯ ಮುಖಂಡರು ಭಾಗವಹಿಸಿದ್ದರು.