ಬೀದರ್ | ಅಂಬೇಡ್ಕರ್ ಚಿಂತನೆಗಳನ್ನು ಅನುಸರಿಸಿ : ಶಾಸಕ ಪ್ರಭು ಚವ್ಹಾಣ್
ಬೀದರ್: ಡಾ.ಬಿ.ಆರ್.ಅಂಬೇಡ್ಕರ್ ಅವರು ಮಾನವ ಹಕ್ಕುಗಳು, ಸಮಾನತೆ ಮತ್ತು ಭಾತೃತ್ವದ ಸ್ಥಾಪನೆಗೆ ಹೋರಾಡಿದ ಮಹಾನಾಯಕ. ಅವರ ಚಿಂತನೆಗಳನ್ನು ಎಲ್ಲರೂ ಅನುಸರಿಸಬೇಕಾದ ಅವಶ್ಯಕತೆಯಿದೆ ಎಂದು ಶಾಸಕ ಪ್ರಭು ಬಿ.ಚವ್ಹಾಣ್ ಕರೆ ನೀಡಿದ್ದಾರೆ.
ಔರಾದ(ಬಿ) ತಾಲ್ಲೂಕಿನ ಬೋರಾಳ ಗ್ರಾಮದ ಬುದ್ದವಿಹಾರಲ್ಲಿ ಶುಕ್ರವಾರ ಡಾ.ಬಿ.ಆರ್.ಅಂಬೇಡ್ಕರ್ ಅವರ 68ನೇ ಮಹಾಪರಿನಿರ್ವಾಣ ದಿನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಡಾ.ಬಿ.ಆರ್.ಅಂಬೇಡ್ಕರ್ ಅವರು ದೇಶ ಕಂಡ ಅಪರೂಪದ ನಾಯಕ. ದೇಶದಲ್ಲಿ ತಾಂಡವವಾಡುತ್ತಿದ್ದ ಅಸಮಾನತೆ ಹಾಗೂ ಮತ್ತಿತರೆ ಸಾಮಾಜಿಕ ಸಮಸ್ಯೆಗಳ ವಿರುದ್ಧ ಹೋರಾಡಿದ್ದವರು. ಇಡೀ ದೇಶದ ಹಿತವನ್ನು ಬಯಸಿದ್ದರು. ದೇಶಕ್ಕೆ ಮಾದರಿ ಸಂವಿಧಾನವನ್ನು ನೀಡಿ ರಾಷ್ಟ್ರವನ್ನು ಸರಿದಾರಿಯಲ್ಲಿ ನಡೆಯುವಂತೆ ಮಾಡಿದ ಮೇರು ನಾಯಕ ಅಂಬೇಡ್ಕರ್ ಎಂದು ಸ್ಮರಿಸಿದರು.
ಅಂಬೇಡ್ಕರ್ ಅವರ ಬಗ್ಗೆ ಎಲ್ಲರೂ ತಿಳಿದುಕೊಳ್ಳಬೇಕು. ವಿಶೇಷವಾಗಿ ಮಕ್ಕಳು ಮತ್ತು ಯುವಜನತೆಯಲ್ಲಿ ತಿಳುವಳಿಕೆ ಹೆಚ್ಚಿಸಿಕೊಳ್ಳಲು ಅಂಬೇಡ್ಕರ್ರನ್ನು ಜಯಂತಿ ಮತ್ತು ಕಾರ್ಯಕ್ರಮಗಳಿಗೆ ಮಾತ್ರ ಸೀಮಿತರಾಗಿಸದೇ ಅವರ ಚಿಂತನೆಗಳನ್ನು ಬದುಕಿನ ಭಾಗವನ್ನಾಗಿಸಿಕೊಳ್ಳಲು ಪ್ರಯತ್ನಿಸಬೇಕು. ಅವರ ವಿಚಾರಧಾರೆಗಳು ನಮ್ಮೆಲ್ಲರ ಬದುಕಿನ ದಾರಿದೀಪವಾಗಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಮುಖಂಡರಾದ ಮಾರುತಿ ಚವ್ಹಾಣ್, ಧೊಂಡಿಬಾ ನರೋಟೆ, ಶಿವಾಜಿರಾವ ಪಾಟೀಲ ಮುಂಗನಾಳ, ರಾಮಶೆಟ್ಟಿ ಪನ್ನಾಳೆ, ಸಚಿನ ರಾಠೋಡ್, ಬಜರಂಗ್ ಪಾಂಡ್ರೆ, ಗಣಪತರಾವ, ಸಂಜು ಬೋರಾಳೆ, ಶಿವಾಜಿರಾವ ಬೋರಾಳೆ, ಸಂಬ್ರತ್ ಪಾಟೀಲ್, ಗಜಾನಂದ ಕಾಂಬಳೆ, ನಂದಾದೀಪ, ಮಿಲಿಂದ ಕಾಂಬಳೆ ಸೇರಿದಂತೆ ಮುಖಂಡರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.