ಬೀದರ್ | ಕೆಮಿಕಲ್ ಫ್ಯಾಕ್ಟರಿಯಲ್ಲಿ ಅನಿಲ ಸೋರಿಕೆ: ಇಬ್ಬರು ಯುವಕರು ಮೃತ್ಯು
ಬೀದರ್, ಜ.22: ರಾಸಾಯನಿಕ ಕಾರ್ಖಾನೆಯೊಂದರಲ್ಲಿ ಸಂಭವಿಸಿದ ಗ್ಯಾಸ್ ಸೋರಿಕೆಯಲ್ಲಿ ಇಬ್ಬರು ಯುವಕರು ಮೃತಪಟ್ಟ ಘಟನೆ ಹುಮನಾಬಾದ್ ಪಟ್ಟಣ ಹೊರವಲಯದ ಕೈಗಾರಿಕಾ ಪ್ರದೇಶದಲ್ಲಿ ರವಿವಾರ ತಡರಾತ್ರಿ ಸಂಭವಿಸಿರುವುದು ವರದಿಯಾಗಿದೆ.
ಅವಘಡದಲ್ಲಿ ಮೃತಪಟ್ಟವರನ್ನು ಹುಮ್ನಾಬಾದ್ ತಾಲೂಕಿನ ವಡ್ಡನಕೇರಾ ಗ್ರಾಮದ ನಿವಾಸಿ ಮುಹಮ್ಮದ್ ಶಾಬಾದ್ (21) ಹಾಗೂ ಮಧ್ಯ ಪ್ರದೇಶ ರಾಜ್ಯದ ಇಂದ್ರಜೀತ್ ಎಂದು ಗುರುತಿಸಲಾಗಿದೆ.
ಶ್ರೀ ಪ್ರಸನ್ನ ಪ್ರೀ ಪ್ರೊಸೆಸಿಂಗ್ ಲಿಮಿಟೆಡ್ ಕಂಪೆನಿ ಎಂಬ ರಾಸಾಯನಿಕ ಕಾರ್ಖಾನೆಯಲ್ಲಿ ರವಿವಾರ ತಡರಾತ್ರಿ ಈ ಅವಘಡ ಸಂಭವಿಸಿದೆ. ಅನಿಲ ಸೋರಿಕೆ ಕಾರಣ ರಾತ್ರಿ ಪಾಳಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಶಾಬಾದ್ ಮತ್ತು ಇಂದ್ರಜೀತ್ ಸಾವನ್ನಪ್ಪಿದ್ದಾರೆ.
ಘಟನಾ ಸ್ಥಳಕ್ಕೆ ಸ್ಥಳಕ್ಕೆ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್. ಹಾಗೂ ಇತರ ಅಧಿಕಾರಿಗಳು ಭೇಟಿ ನೀರಿ ಪರಿಶೀಲಿಸಿದ್ದಾರೆ.
ಸುತ್ತಮುತ್ತಲಿನ ಪರಿಸರದಲ್ಲಿ ಯಾವುದೇ ಗ್ಯಾಸ್ ಸೋರಿಕೆ ಆಗಿಲ್ಲ. ಆದ್ದರಿಂದ ಸಾರ್ವಜನಿಕರು ಆತಂಕಪಡಬೇಕಾಗಿಲ್ಲ ಎಂದು ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಸ್ಪಷ್ಟಪಡಿಸಿದ್ದಾರೆ.