ಬೀದರ್ | ಪ್ರಾಕೃತಿಕ ಚಿಕಿತ್ಸೆಯ ಮಹತ್ವ ಅರಿಯಿರಿ : ಜಗದೀಶ ಬುಟ್ಟೆ
ಬರಿದಷಾಹಿ ಉದ್ಯಾನವನದಲ್ಲಿ ಪ್ರಾಕೃತಿಕ ದಿವಸ ಆಚರಣೆ
ಬೀದರ್ : ಪ್ರಾಕೃತಿಕ ಚಿಕಿತ್ಸೆ ಪದ್ಧತಿಯ ಮಹತ್ವವನ್ನು ಪ್ರತಿಯೊಬ್ಬರು ಅರಿಯಬೇಕು ಎಂದು ಜಗದೀಶ ಬುಟ್ಟೆ ಹೇಳಿದ್ದಾರೆ.
ಬೀದರ್ ನಗರದ ಬರೀದಷಾಹಿ ಉದ್ಯಾನವನದಲ್ಲಿ ಇಂಟರ್ನ್ಯಾಷನಲ್ ನ್ಯಾಚುರೋಪತಿ ಆರ್ಗನೈಸೇಶನ್ ಹಾಗೂ ಸೂರ್ಯ ಫೌಂಡೇಶನ್ ವತಿಯಿಂದ ನಡೆದ ʼಪ್ರಾಕೃತಿಕ ಚಿಕಿತ್ಸಾ ದಿವಸʼ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಭಾರತ ದೇಶದಲ್ಲಿ ಪುರಾತನ ಕಾಲದಿಂದಲೂ ಯೋಗ ಹಾಗೂ ಪ್ರಾಕೃತಿಕ ಚಿಕಿತ್ಸಾ ಪದ್ದತಿ ಅನುಸರಿಸಿಯೇ ಹಲವು ರೋಗಗಳಿಗೆ ಚಿಕಿತ್ಸೆ ಕೊಡಲಾಗುತ್ತಿತ್ತು, ಪ್ರಾಕೃತಿಕ ಚಿಕಿತ್ಸಾ ವಿಧಾನದಲ್ಲಿ ರಾಸಾಯನಿಕಗಳನ್ನು ಬಳಸುವುದಿಲ್ಲ ಹೀಗಾಗಿ ದೇಹ ಬಲಗೊಳ್ಳುತ್ತದೆ ಹಾಗೂ ರೋಗ ನಿರೋಧಕ ಶಕ್ತಿ ಕೂಡ ಹೆಚ್ಚುತ್ತದೆ ಎಂದು ತಿಳಿಸಿದರು.
ಸೂರ್ಯ ಫೌಂಡೇಶನ್ ರಾಜ್ಯ ಸಂಯೋಜಕರಾದ ಗುರುನಾಥ ರಾಜಗೀರಾ ಮಾತನಾಡಿ, ಪ್ರಕೃತಿ ಚಿಕಿತ್ಸೆ ಕುರಿತ ಮಹತ್ವ ಹಾಗೂ ವೈಜ್ಞಾನಿಕ ತಿಳುವಳಿಕೆಯನ್ನು ಮುನ್ನಡೆಸುವುದು ಮತ್ತು ಸಾಂಪ್ರದಾಯಿಕ ಬುದ್ಧಿವಂತಿಕೆಯನ್ನು ಆಧುನಿಕ ಆರೋಗ್ಯ ಪದ್ಧತಿಗಳೊಂದಿಗೆ ಸಂಯೋಜಿಸುವ ನಿಟ್ಟಿನಲ್ಲಿ ಐ.ಎನ್.ಓ ಸಂಸ್ಥೆಯ ರಾಷ್ಟ್ರೀಯ ಅದ್ಯಕ್ಷರಾದ ಅನಂತ ಬಿರಾದಾರ ಅವರ ನೇತೃತ್ವದಲ್ಲಿ ಬಹಳ ಸಕ್ರಿಯವಾಗಿ ದೇಶಾದ್ಯಂತ ಕೆಲಸ ಮಾಡುತ್ತಿದೆ ಎಂದರು.
ಪ್ರತಿವರ್ಷ ನ.18 ರಂದು ನ್ಯಾಚುರೋಪತಿ ದಿವಸ ಎಂದು ಆಚರಿಸಲಾಗುತ್ತಿದೆ, ಬೀದರ್ ಜಿಲ್ಲೆಯಲ್ಲಿಯು ಐ.ಎನ್.ಓ ನೇತೃತ್ವದಲ್ಲಿ ಪ್ರಾಕೃತಿಕ ಚಿಕಿತ್ಸಾ ಮಹತ್ವ ಸಾರುವ ನಿಟ್ಟಿನಲ್ಲಿ ಹಲವಾರು ಕಾರ್ಯಕ್ರಮಗಳನ್ನು ಮಾಡುತ್ತಾ ಸಕ್ರಿಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಪತಂಜಲಿ ಯೋಗ ಸಮಿತಿಯ ನಂದಕುಮಾರ ತಾಂದಳೆ, ಶಂಕರರಾವ ಚಿದ್ರಿ, ಮೋಹನ್ ಎಳನೋರಕರ್, ರಾಜು ನುಕಲವಾರ್, ಕೀಶೋರ ಕುಲಕರ್ಣಿ, ರಾಚಯ್ಯಾ ಸ್ವಾಮಿ, ಸುಮನ ಸೂರ್ಯನ್, ನೀಲಮ್ಮಾ ರೋಗನ್, ವಿಜಯ ರಂಗದಾಳ ಸೇರಿದಂತೆ ಇತರರಿದ್ದರು.