ಬೀದರ್ | ಕ್ಷಯರೋಗ ನಿರ್ಮೂಲನೆಗೆ 100 ದಿನಗಳ ಪ್ರಚಾರ ಕಾರ್ಯಕ್ರಮಕ್ಕೆ ಚಾಲನೆ
ಬೀದರ್ : ಕ್ಷಯರೋಗ ನಿರ್ಮೂಲನೆ ಕುರಿತು 100 ದಿನಗಳ ಜನ ಜಾಗೃತಿ ಕಾರ್ಯಕ್ರಮದ ಪ್ರಚಾರಕ್ಕೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಧ್ಯಾನೇಶ್ವರ್ ನಿರಗುಡೆ ಚಾಲನೆ ನೀಡಿದರು.
ನಗರದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಾರ್ಯಾಲಯದಲ್ಲಿ ಜನ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಈ ಅಭಿಯಾನದ ಗುರಿಯು ದುರ್ಬಲ ಜನ ಸಂಖ್ಯೆಯಲ್ಲಿ ಸಕ್ರಿಯ ಕ್ಷಯರೋಗ ಪ್ರಕರಣಗಳನ್ನು ಕಂಡುಹಿಡಿಯುವುದು, ಆರಂಭಿಕ ರೋಗ ನಿರ್ಣಯ ಮಾಡಿ ತ್ವರಿತ ಚಿಕಿತ್ಸೆ ಪ್ರಾರಂಭಿಸುವುದು, ಪೌಷ್ಠಿಕ ಆಹಾರದ ಆರೈಕೆ ಕಲ್ಪಿಸುವುದು, ದುರ್ಬಲ ಪ್ರದೇಶಗಳಲ್ಲಿ ಕ್ಷಯರೋಗ ಜಾಗೃತಿ ವೃದ್ಧಿಸುವುದು ಮತ್ತು ಕ್ಷಯರೋಗದ ತೀವ್ರತೆಯನ್ನು ಕಡಿಮೆಗೊಳಿಸುವುದಾಗಿದೆ ಎಂದರು.
ಈ ಜಾಥಾವು ನಗರದ ರಾಜೀವ ಗಾಂಧಿ, ಅಂಬೇಡ್ಕರ್, ಶಿವಾಜಿ ವೃತ್ತಗಳ ಮೂಲಕ ಜಿಲ್ಲಾಧಿಕಾರಿಗಳ ಕಚೇರಿ, ಹರಳಯ್ಯ ವೃತ ಮಾರ್ಗವಾಗಿ ತೆರಳಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಸಭಾಂಗಣದಲ್ಲಿ ಮುಕ್ತಾಯಗೊಂಡಿತು.
ಜಿಲ್ಲಾ ಮಟ್ಟದ ಕಾರ್ಯಕ್ರಮದಲ್ಲಿ ಟಿ.ಬಿ ಚಾಂಪಿಯನ್ ಅವರನ್ನು ಸನ್ಮಾನಿಸಲಾಯಿತು. ಮೂವರು ಹೊಸ ರೋಗಿಗಳಿಗೆ ರವಿ ಪ್ರಭಾ ಪ್ರಯೋಗ ಶಾಲಾ ತಂತ್ರಜ್ಞ ಅಧಿಕಾರಿಯವರು ದತ್ತು ಪಡೆದು 6 ತಿಂಗಳವರೆಗೆ ಪೌಷ್ಠಿಕ ಆಹಾರ ಕಿಟ್ ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಡಾ.ಅನೀಲ್ಕುಮಾರ್ ಚಿಂತಾಮಣಿ, ಜಿಲ್ಲಾ ಮಲೇರಿಯಾ ಅಧಿಕಾರಿ ಡಾ.ರಾಜಶೇಖರ್ ಪಾಟೀಲ್, ಜಿಲ್ಲಾ ಕುಷ್ಠರೋಗ ಅಧಿಕಾರಿ ಡಾ.ಕಿರಣ ಪಾಟೀಲ್, ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ.ದೀಲಿಪ್ ಡೊಂಗರೆ, ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಸಂಗಾರಡ್ಡಿ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣದ ಸಿಬ್ಬಂದಿ ಮತ್ತು ಜಿಲ್ಲಾ ಕ್ಷಯರೋಗ ಕಚೇರಿ ಸಿಬ್ಬಂದಿ ಭಾಗವಹಿಸಿದ್ದರು.