ಬೀದರ್ | ಕಾಯಕದಲ್ಲಿ ದೇವರನ್ನು ಕಂಡ ಮಡಿವಾಳ ಮಾಚಿದೇವರು : ಸಚಿವ ರಹೀಂ ಖಾನ್

ಬೀದರ್ : ಮಡಿವಾಳ ಮಾಚಿದೇವರು ವಚನಗಳು ಸಂರಕ್ಷಿಸಿದ ವೀರಗಣಚಾರಿ ಗುರು ಆಗಿದ್ದು, ಕಾಯಕದಲ್ಲಿ ದೇವರನ್ನು ಕಂಡ ಶರಣರಾಗಿದ್ದಾರೆ. ನಾವೆಲ್ಲರೂ ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯೋಣ ಎಂದು ಪೌರಾಡಳಿತ ಹಾಗೂ ಹಜ್ ಖಾತೆ ಸಚಿವ ರಹೀಂ ಖಾನ್ ಹೇಳಿದರು.
ಇಂದು ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯವರ ಸಂಯುಕ್ತಾಶ್ರಯದಲ್ಲಿ ನಗರದ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಜರುಗಿದ ʼಮಡಿವಾಳ ಮಾಚಿದೇವರ ಜಯಂತಿʼ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಲಿಂಗಾಯತ ಧರ್ಮದಲ್ಲಿ ನಿಷ್ಠಾವಂತ ಕಾಯಕ ಜೀವಿಗಳಾಗಿದ್ದ ಮಡಿವಾಳ ಮಾಚಿದೇವರು ಸಮಾಜ ಸೇವೆಯಲ್ಲಿ ನಿರಂತರವಾಗಿ ತೋಡಗಿದರು. ಅವರು ಕಾಯಕದಲ್ಲಿ ದೇವರನ್ನು ಕಂಡರು. ದೇವರು ಗುಡಿಯಲ್ಲಿ ಇರುವುದಿಲ್ಲ, ದೇವರು ನಿರಾಕಾರನಾಗಿದ್ದು ಎಲ್ಲೆಡೆ ವಿಶ್ವವ್ಯಾಪಿಯಾಗಿದ್ದಾನೆ. ಎಲ್ಲರೂ ಉಸಿರಾಡುವ ಗಾಳಿ ಒಂದೆ. ದೇವರು ಒಬ್ಬನೇ, ನಾಮ ಹಲವು ಎಂಬಂತೆ ನಾವೆಲ್ಲರೂ ಒಂದೇ ಸಮಾಜದಲ್ಲಿ ಸಹಬಾಳ್ವೆಯಿಂದ ಬಾಳಬೇಕು ಎಂದರು.
ಅಕ್ಕಮಹಾದೇವಿ ಮಹಾವಿದ್ಯಾಲಯದ ರಸಾಯನಶಾಸ್ತ್ರ ವಿಭಾಗದ ಹಿರಿಯ ಉಪನ್ಯಾಸಕ ಶಿವಶರಣಪ್ಪಾ ಹುಗ್ಗಿ ಪಾಟೀಲ್ ಅವರು ಮಾತನಾಡಿ, 12ನೇ ಶತಮಾನ ಅಚ್ಚರಿಯ, ಸಮಗ್ರ ಕ್ರಾಂತಿಯ, ಸಮಾನತೆಯ ಶತಮಾನವಾಗಿದೆ. ಬಟ್ಟೆ ತೊಳೆಯುವವರು, ಬುಟ್ಟಿ ಮಾಡುವವರು, ಕಸ ಗೂಡಿಸುವವರು, ದನ ಕಾಯುವವರು ಇಂತಹ ಸಾಮಾನ್ಯರಲ್ಲಿ ಸಾಮಾನ್ಯರನ್ನು ಸಂಸ್ಕಾರ ಕೊಟ್ಟು ಲೋಕಕ್ಕೆ ಅರಿವು ನೀಡುವ ಗುರು ಸ್ವರೂಪವಾದರು. ಇದಕ್ಕೆಲ್ಲ ಜಗವೆಲ್ಲಕ್ಕೂ ಗುರು ಎನಿಸಿಕೊಂಡ ಬಸವಣ್ಣನವರೇ ಕಾರಣರು ಎಂದು ತಿಳಿಸಿದರು.
ಕಾರ್ಯಕ್ರಮದ ಮುಂಚೆ ಬೆಳಿಗ್ಗೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅಪರ ಜಿಲ್ಲಾಧಿಕಾರಿ ಶಿವುಕುಮಾರ್ ಶೀಲವಂತ್ ಅವರು ಮಡಿವಾಳ ಮಾಚಿದೇವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ನಂತರ ಮಡಿವಾಳ ಮಾಚಿದೇವರ ಭಾವಚಿತ್ರದ ಮೆರವಣಿಗೆಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಮಹಮ್ಮದ್ ಗೌಸ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ್ ಸಿಂಧೆ, ಮಡಿವಾಳ ಮಾಚಿದೇವರ ಸಮಾಜದ ಜಿಲ್ಲಾಧ್ಯಕ್ಷ ಸುಭಾಷ್ ಮಡಿವಾಳ್, ಉಪಾಧ್ಯಕ್ಷ ಬಾಬುರಾವ್ ಮಡಿವಾಳ್, ಮುಖಂಡರಾದ ದಿಗಂಬರ್ ಮಡಿವಾಳ್, ಮಹೇಶ್ ಮಡಿವಾಳ್, ಶಿವುಕುಮಾರ್ ಕಂದಗೂಳ್, ಅಶೋಕ್ ತೇಲಂಗ್, ದೀಪಕ್ ಮಡಿವಾಳ್, ಚನ್ನಬಸವ ಹೇಡೆ ಹಾಗೂ ಮಲ್ಲಿಕಾರ್ಜುನ ಸ್ವಾಮಿ ಗಾಯನ ತಂಡ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.