ಬೀದರ್ | ಸಚಿವ ಪ್ರಿಯಾಂಕ್ ಖರ್ಗೆ ಆಪ್ತನಿಂದ ಕೊಲೆ ಬೆದರಿಕೆ ಆರೋಪ ; ಗುತ್ತಿಗೆದಾರ ಆತ್ಮಹತ್ಯೆ
ಸಚಿನ್ ಮೊನಪ್ಪ ಪಂಚಾಳ
ಬೀದರ್ : ಸಚಿವ ಪ್ರಿಯಾಂಕ್ ಖರ್ಗೆ ಆಪ್ತನಿಂದ ಕೊಲೆ ಬೆದರಿಕೆ ಸೇರಿದಂತೆ ಹಲವು ಗಂಭೀರ ಆರೋಪಗಳನ್ನು ಮಾಡಿ ಡೆತ್ ನೋಟ್ ಬರೆದಿಟ್ಟು, ಗುತ್ತಿಗೆದಾರ ಓರ್ವರು ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ನಡೆದಿದೆ.
ಭಾಲ್ಕಿ ತಾಲ್ಲೂಕಿನ ತುಂಗಾವ ಕಟ್ಟಿಯ ನಿವಾಸಿ ಸಚಿನ್ ಮೊನಪ್ಪ ಪಂಚಾಳ (26) ಆತ್ಮಹತ್ಯೆ ಮಾಡಿಕೊಂಡ ಗುತ್ತಿಗೆದಾರ ಎಂದು ತಿಳಿದು ಬಂದಿದೆ.
ಸಚಿವ ಪ್ರಿಯಾಂಕ್ ಖರ್ಗೆ ಆಪ್ತ ರಾಜು ಕಪನೂರು ಮೇಲೆ ಗಂಭೀರ ಆರೋಪ ಮಾಡಲಾಗಿದ್ದು, ಟೆಂಡರ್ ಕೊಡುವ ವಿಚಾರಕ್ಕೆ ಲಕ್ಷಾಂತರ ರೂಪಾಯಿ ಹಣ ಪಡೆದು ವಂಚಿಸಿದ್ದಾರೆ. ಬಳಿಕ ರಾಜು ಕಪನೂರ್ ಮತ್ತೆ ಒಂದು ಕೋಟಿ ರೂ. ಹಣಕ್ಕೆ ಬೇಡಿಕೆ ನೀಡಿದ್ದಾರೆ. ಹಣ ನೀಡದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.
ಕಲಬುರಗಿಯ ಮಾಜಿ ಕಾರ್ಪೊರೇಟ್ ರಾಜು ಕಪನೂರು, ನಂದಕುಮಾರ್ ನಾಗಭುಜಂಗೆ, ಗೋರಖನಾಥ್ ಸೇರಿ 6 ಜನರ ವಿರುದ್ಧ ಜೀವ ಬೆದರಿಕೆ ಆರೋಪ ಮಾಡಲಾಗಿದೆ.
ಗುರುವಾರ ಬೀದರ್ ರೈಲ್ವೆ ಹಳಿಯಲ್ಲಿ ಮೃತದೇಹ ಪತ್ತೆಯಾಗಿದೆ. ಪತ್ರದಲ್ಲಿ ಉಲ್ಲೇಖವಾಗಿರುವ ರಾಜು ಕಪನೂರು ಸೇರಿ ಎಲ್ಲರೂ ಘಟನಾ ಸ್ಥಳಕ್ಕೆ ಬರೋವರೆಗೆ ಇಲ್ಲಿಂದ ಮೃತದೇಹ ತೆಗೆದುಕೊಂಡು ಹೋಗಲು ಬಿಡಲ್ಲಾ ಎಂದು ರೈಲು ತಡೆದು ಕುಟುಂಬಸ್ಥರು ಪ್ರತಿಭಟನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಆತ್ಮಹತ್ಯೆ ಘಟನೆ ಕುರಿತು ಬೀದರ್ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.