ಬೀದರ್ | ದಕ್ಷಿಣ ಕ್ಷೇತ್ರದಲ್ಲಿ ಐದು ಐಟಿಐ ಕಾಲೇಜು ಆರಂಭಿಸಲು ಸಚಿವರಿಗೆ ಶಾಸಕ ಬೆಲ್ದಾಳೆ ಮನವಿ
ಬೀದರ್ : ದಕ್ಷಿಣ ವಿಧಾನಸಭೆ ಕ್ಷೇತ್ರದ ಐದು ಜಿಪಂ (ಹೋಬಳಿ) ವ್ಯಾಪ್ತಿಯಲ್ಲಿ ತಲಾ ಒಂದು ಸರಕಾರಿ ಕೈಗಾರಿಕಾ ತರಬೇತಿ ಕೇಂದ್ರ (ಐಟಿಐ) ಸ್ಥಾಪಿಸುವಂತೆ ಕ್ಷೇತ್ರದ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಒತ್ತಾಯಿಸಿದ್ದಾರೆ.
ಬೆಳಗಾವಿಯಲ್ಲಿ ಸೋಮವಾರ ವೈದ್ಯಕೀಯ ಶಿಕ್ಷಣ ಹಾಗೂ ಕೌಶಲಾಭಿವೃದ್ಧಿ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಅವರಿನ್ನು ಭೇಟಿಯಾಗಿ ಈ ಕುರಿತು ಮನವಿ ಪತ್ರ ಸಲ್ಲಿಸಿ, ಮನ್ನಾಎಖೆಳ್ಳಿ, ಮನ್ನಳ್ಳಿ, ಬೆಮಳಖೇಡ ಸೇರಿದಂತೆ ಐದು ಕಡೆ ಐಟಿಐ ಕಾಲೇಜುಗಳನ್ನು ಸ್ಥಾಪಿಸಿ ಈ ಭಾಗದ ವಿದ್ಯಾರ್ಥಿಗಳಿಗೆ ವೃತ್ತಿಪರ ಶಿಕ್ಷಣದ ಸೌಲಭ್ಯ ಕಲ್ಪಿಸಬೇಕು ಎಂದು ಗಮನ ಸೆಳೆದರು.
ದಕ್ಷಿಣ ವಿಧಾನಸಭಾ ಕ್ಷೇತ್ರ ಸಂಪೂರ್ಣ ಹಳ್ಳಿಗಳಿಂದಲೇ ಕೂಡಿದೆ. ಬಹುತೇಕ ಗ್ರಾಮಗಳು ಹಿಂದುಳಿದಿವೆ. ನಿರುದ್ಯೋಗ ಸಮಸ್ಯೆ ಜಾಸ್ತಿಯಾಗಿದೆ. ಹೀಗಾಗಿ ಶಿಕ್ಷಣ ಕ್ಷೇತ್ರದಲ್ಲಿ ವಿಶೇಷವಾಗಿ ವೃತ್ತಿಪರ ಶಿಕ್ಷಣದಲ್ಲಿ ಈ ಭಾಗಕ್ಕೆ ಸರಕಾರ ಹೆಚ್ಚು ಆದ್ಯತೆ ನೀಡುವ ಅಗತ್ಯವಿದೆ. ಐಟಿಐನಂತಹ ವೃತ್ತಿಪರ ಶಿಕ್ಷಣ ತರಬೇತಿ ಸಿಕ್ಕರೆ ಈ ಭಾಗದ ವಿದ್ಯಾರ್ಥಿಗಳು ಔದ್ಯೋಗಿಕ ಕ್ಷೇತ್ರದಲ್ಲಿ ಕೆಲಸ ಮಾಡಬಹುದು. ಅಥವಾ ಸ್ವಂತ ಉದ್ಯೋಗ ಆರಂಭಿಸಿ ಸ್ವಾವಲಂಬಿ ಬದುಕು ನಡೆಸಬಹುದು. ಆದ್ಯತೆ ಮೇಲೆ ಐಟಿಐ ಕಾಲೇಜು ಸ್ಥಾಪನೆಗೆ ಮಂಜೂರಿ ನೀಡುವಂತೆ ಮನವಿ ಮಾಡಿದ್ದಾರೆ.
ಈ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕ್ಷೇತ್ರದಲ್ಲಿ ಕೌಶಲ ಅಭಿವೃದ್ಧಿ ಕೇಂದ್ರ ಸ್ಥಾಪಿಸಬೇಕು. ಇದರಿಂದ ಗ್ರಾಮೀಣ ನಿರುದ್ಯೋಗಿಗಳು ವಿವಿಧ ಕೌಶಲ್ಯ ತರಬೇತಿ ಪಡೆದು ತಮ್ಮ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗಲಿದೆ ಎಂದು ಕೋರಿದರು. ಮನವಿ ಪತ್ರ ಸ್ವೀಕರಿಸಿದ ಸಚಿವರು, ಈ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಹೊಸ ಐಟಿಐಗಳಿಗೆ ಅನುಮತಿ ನೀಡುವಾಗ ಕ್ಷೇತ್ರಕ್ಕೆ ಆದ್ಯತೆ ಕೊಡುವ ಭರವಸೆ ನೀಡಿದರು.