ಬೀದರ್ | ಜಾನುವಾರು ಗಣತಿಗೆ ಶಾಸಕ ಪ್ರಭು ಚವ್ಹಾಣ್ ಚಾಲನೆ
ಬೀದರ್ : ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಿಂದ ಹಮ್ಮಿಕೊಂಡಿರುವ 21ನೇ ರಾಷ್ಟ್ರೀಯ ಜಾನುವಾರು ಗಣತಿ ಕಾರ್ಯಕ್ರಮಕ್ಕೆ ಬೋಂತಿ ತಾಂಡಾದ ಗೃಹ ಕಚೇರಿ ಆವರಣದಲ್ಲಿ ಶಾಸಕ ಪ್ರಭು ಬಿ.ಚವ್ಹಾಣ್ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಅವರು, ಕೇಂದ್ರ ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯದಿಂದ ಪ್ರತಿ ಐದು ವರ್ಷಕ್ಕೊಮ್ಮೆ ಜಾನುವಾರು ಸಮೀಕ್ಷೆ ನಡೆಸುತ್ತದೆ. ಪಶುಸಂಗೋಪನೆ ಅಭಿವೃದ್ಧಿ, ಮೇವಿನ ಲಭ್ಯತೆ, ಆರೋಗ್ಯ, ಔಷಧೋಪಚಾರ, ಉತ್ಪಾದಕತೆ ಹೆಚ್ಚಿಸಲು, ಯೋಜನೆ ರೂಪಿಸಲು ಸಹಕಾರಿಯಾಗಲಿರುವ ಜಾನುವಾರು ಗಣತಿ ಕಾರ್ಯಕ್ರಮ ಔರಾದ(ಬಿ) ಮತಕ್ಷೇತ್ರದಲ್ಲಿ ಅಚ್ಚುಕಟ್ಟಾಗಿ ನಡೆಯಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ಗಣತಿಯಿಂದಾಗಿ ಎಷ್ಟು ಜಾತಿಯ ಜಾನುವಾರುಗಳಿವೆ, ಅವುಗಳ ತಳಿ, ಮಾಲೀಕತ್ವದ ಸ್ಥಿತಿಗತಿ ಬಗ್ಗೆ ಸರಿಯಾದ ಮಾಹಿತಿ ಲಭ್ಯವಾಗಲಿದೆ. ಔರಾದನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ರೈತರಿದ್ದು, ಜಾನುವಾರು ಸಾಕಾಣಿಕೆಯನ್ನು ಉಪ ಕಸುಬಾಗಿ ಮಾಡಿಕೊಂಡಿದ್ದಾರೆ. ಇವರೆಲ್ಲರಿಗೂ ಸರಕಾರದ ಯೋಜನೆಗಳು ಸಮರ್ಪಕವಾಗಿ ತಲುಪಿಸುವಂತಾಗಲು ಜಾನುವಾರು ಗಣತಿ ಸಾಕಷ್ಟು ಸಹಕಾರಿಯಾಗಲಿದೆ. ಹಾಗಾಗಿ ಜಾನುವಾರು ಗಣತಿ ಯಶಸ್ವಿಯಾಗಿ ನಡೆಯಬೇಕೆಂದು ಹೇಳಿದರು.
ಅಧಿಕಾರಿಗಳು ಕಚೇರಿಯಲ್ಲಿ ಕುಳಿತು ಕೆಲಸ ಮಾಡದೇ, ಪ್ರತಿ ಗ್ರಾಮದಲ್ಲಿ ರೈತರ ಮನೆ-ಮನೆಗೆ ತೆರಳಿ ಗಣತಿ ಕಾರ್ಯ ಕೈಗೊಳ್ಳಬೇಕು. ಸರಕಾರಕ್ಕೆ ನಿಖರವಾದ ಮಾಹಿತಿ ನೀಡಬೇಕು. ರೈತರ ಹಿತದೃಷ್ಟಿಯಿಂದ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಪ್ರಮಾಣಿಕವಾಗಿ ಕೆಲಸ ಮಡಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಪಶು ಸಂಗೋಪನೆ ಇಲಾಖೆಯ ಸಹಾಯಕ ನಿರ್ದೇಶಕ ಫಾಹಿಮ್ ಖುರೇಷಿ, ಡಾ.ಸೂರ್ಯವಂಶಿ, ಅನೀಲ ತೋರ್ಣೆಕರ್, ಡಾ.ಝಕಿಯೋದ್ದಿನ್, ಮುಖಂಡರಾದ ಸಚಿನ ರಾಠೋಡ್ ಸೇರಿದಂತೆ ಇತರರು ಉಪಸ್ಥಿತರಿದ್ದರು.