ಬೀದರ್ | ಮೊರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿಗಳ ಮೇಲೆ ಹಲ್ಲೆ ಆರೋಪ; ಪ್ರಾಂಶುಪಾಲ ಸೇರಿ ಇಬ್ಬರು ಅಮಾನತು
ಬೀದರ್ : ಸಂತಪುರ್ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಗಳ ಮೇಲಿನ ಹಲ್ಲೆ ಆರೋಪಕ್ಕೆ ಸಂಬಂಧಿಸಿದಂತೆ ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಶಾಲೆಯ ಪ್ರಾಂಶುಪಾಲ ಮತ್ತು ನಿಲಯ ಮೇಲ್ವಿಚಾರಕನನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.
ಔರಾದ್ ತಾಲೂಕಿನ ಸಂತಪುರ ಮೊರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾಂಶುಪಾಲರಾಗಿದ್ದ ಭಗವಾನ್ ಕಾಂಬಳೆ ಹಾಗೂ ಪ್ರಭಾರ ನಿಲಯಪಾಲಕ ಶಿವಕುಮಾರ್ ವೈಜಪ್ಪ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಕಾರ್ಯನಿರ್ವಾಹಕ ನಿರ್ದೇಶಕ ಕಾಂತರಾಜು ಪಿ.ಎಸ್. ಆದೇಶ ಹೊರಡಿಸಿದ್ದಾರೆ.
ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ ಹಾಗೂ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಸಿಂಧು ಎಚ್. ಎಸ್. ಅವರು ಗುರುವಾರ ವಸತಿ ಶಾಲೆಗೆ ಭೇಟಿ ನೀಡಿ ಘಟನೆ ಕುರಿತು ಮಾಹಿತಿ ಪಡೆದು ವರದಿ ಸಲ್ಲಿಸಿದ್ದರು.
ಪ್ರಾಂಶುಪಾಲ ಹಾಗೂ ನಿಲಯ ಪಾಲಕರ ಕಾರ್ಯವೈಖರಿಯಲ್ಲಿನ ಲೋಪದೋಷ ಕುರಿತು ನೀಡಿದ ವರದಿ ಆಧಾರದ ಮೇಲೆ ವಸತಿ ಶಾಲೆಗೆ ಭೇಟಿ ನೀಡಿದ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರು, ವಸತಿ ಶಾಲೆ ವಿದ್ಯಾರ್ಥಿಗಳ ಮೇಲಿನ ಹಲ್ಲೆ ಹಾಗೂ ವಸತಿ ಶಾಲೆಯಲ್ಲಿನ ಕೆಲ ಅವ್ಯವಸ್ಥೆ ಕುರಿತು ನೀಡಿದ ನೋಟಿಸ್ಗೆ ಸಮಂಜಸ ಉತ್ತರ ನೀಡದಿರುವುದರ ಕಾರಣ ಇವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ ಎಂದು ಆದೇಶದಲ್ಲಿ ಉಲ್ಲೇಖಿಸಿದ್ದಾರೆ.