ಬೀದರ್ | ಯಾವುದೇ ಧರ್ಮ ಅಪಾಯದಲ್ಲಿಲ್ಲ, ಸಂವಿಧಾನ ಅಪಾಯದಲ್ಲಿದೆ : ಲಕ್ಷ್ಮಣ ಯಾದವ್

ಬೀದರ್ : ಪ್ರಸ್ತುತ ಸಮಯದಲ್ಲಿ ಯಾವುದೇ ಧರ್ಮಗಳು ಅಪಾಯದಲ್ಲಿಲ್ಲ, ಬದಲಾಗಿ ನಮ್ಮ ದೇಶದ ಸಂವಿಧಾನ ಅಪಾಯದಲ್ಲಿದೆ. ಸಂವಿಧಾನ ಅಪಾಯದಲ್ಲಿದ್ದರೆ ನಾವು ಅಪಾಯದಲ್ಲಿರುತ್ತೇವೆ. ಹಾಗಾಗಿ ನಾವೆಲ್ಲರೂ ಒಗ್ಗಟ್ಟಾಗಿ ಸಂವಿಧಾನ ರಕ್ಷಣೆ ಮಾಡಬೇಕಾಗಿದೆ ಎಂದು ವಿಚಾರವಾದಿ ಡಾ.ಲಕ್ಷ್ಮಣ ಯಾದವ್ ತಿಳಿಸಿದ್ಧಾರೆ.
ಜ.26ರಂದು ನಗರದ ಅಂಬೇಡ್ಕರ್ ವೃತ್ತದಲ್ಲಿ ನಡೆದ 76ನೇ ಗಣರಾಜ್ಯೋತ್ಸವ ಭಾರತದ ಸಂವಿಧಾನ ಜಾರಿಯಾದ ಸಂಭ್ರಮ, ಸಂವಿಧಾನ ಮತ್ತು ಪ್ರಜಾಪ್ರಭುತ್ವ ಜನ ಜಾಗೃತಿ ಸಮಾವೇಶದಲ್ಲಿ ಮಾತನಾಡಿದ ಅವರು, ಯುವಕರು ಇತಿಹಾಸ ತಿಳಿದುಕೊಂಡು ಸಮ ಸಮಾಜ ನಿರ್ಮಾಣ ಮಾಡಲು ಹೋರಾಟ ಮಾಡಬೇಕು ಎಂದು ಹೇಳಿದರು.
ಸಂವಿಧಾನದಲ್ಲಿ ದಲಿತರಿಗೆ ಮಾತ್ರ ಹಕ್ಕು ನೀಡಲಿಲ್ಲ. ಅದರಲ್ಲಿ ಎಲ್ಲ ಭಾರತೀಯರಿಗೆ ಹಕ್ಕು ಒದಗಿಸಿ ಕೊಡಲಾಗಿದೆ. ಸಂವಿಧಾನವು ಮೇಲು ಕೀಳು ಎನ್ನುವ ಭೇದ ಭಾವ ನಾಶಗೊಳಿಸಿ ಸಮಾನತೆ ಸಾರಿದೆ. ಇದರಿಂದಾಗಿ ಇವತ್ತಿಗೂ ಸಮಾನತೆ ಬಯಸದವರು ಸಂವಿಧಾನವನ್ನು ತಮ್ಮ ವಿರೋಧಿಯಾಗಿ ತಿಳಿದುಕೊಳ್ಳುತ್ತಾರೆ. ಇಂಥವರೇ ಸಂವಿಧಾನಕ್ಕೆ ಅಪಾಯಕಾರಿ. ಇಂತಹ ಜನರನ್ನು ಗುರುತಿಸುವುದು ಅಗತ್ಯ ಇದೆ. ಅವರನ್ನು ಗುರುತಿಸದೆ, ಸಂವಿಧಾನಕ್ಕೆ ಹೂವಿನ ಹಾರ ಹಾಕಿ ಪೂಜಿಸುವುದರಿಂದ ಸಂವಿಧಾನ ಉಳಿಸಲು ಸಾಧ್ಯವಿಲ್ಲ. ಸಂವಿಧಾನವನ್ನು ಸಾಮಾನ್ಯ ವ್ಯಕ್ತಿಯವರೆಗೂ ತಲುಪಿಸಿ, ಪ್ರತಿಯೊಬ್ಬರ ಮನಸಲ್ಲಿ ಇಳಿಸಿದಾಗ ಮಾತ್ರ ಸಂವಿಧಾನದ ರಕ್ಷಣೆ ಸಾಧ್ಯವಿದೆ ಎಂದು ತಿಳಿಸಿದರು.
ಡಾ.ಜಯದೇವಿ ಗಾಯಕವಾಡ್ ಮಾತನಾಡಿ, ಮನುವಾದಿಗಳು, ಆರೆಸ್ಸೆಸ್ ಮುಖಂಡರು ಸೇರಿ ಈ ದೇಶದಲ್ಲಿ ಮತ್ತೆ ವರ್ಣ ವ್ಯವಸ್ಥೆ, ಜಾತಿ ಪದ್ಧತಿ ಹುಟ್ಟು ಹಾಕಿ, ಹೆಣ್ಣನ್ನು ಕೇವಲ ನಾಲ್ಕು ಗೋಡೆ ಮಧ್ಯದಲ್ಲಿ ಬಂಧಿಸಿ ಅವರನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡಬೇಕು ಎಂದು ಅವರು ಈ ದೇಶದಲ್ಲಿ ಮತ್ತೊಂದು ಹೊಸ ಸಂವಿಧಾನ ಬರೆಯಲು ಸಜ್ಜಾಗಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.
ಸಂವಿಧಾನದಲ್ಲಿ ಎಲ್ಲ ಸಮುದಾಯದ ಮಹಿಳೆಯರಿಗೆ ಸಮಾನವಾದ ಹಕ್ಕನ್ನು ನೀಡಲಾಗಿದೆ. ಬಹುಮುಖ್ಯವಾಗಿ ಮಹಿಳೆಯರಿಗೆ ಸಮಾನವಾದ ಆರ್ಥಿಕ ಹಕ್ಕು ನೀಡಲಾಗಿದೆ. ಸಂವಿಧಾನದಿಂದ ಇಂದು ಮಹಿಳೆಯರು ಅಧಿಕಾರಿಗಳಾಗಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ದಿವ್ಯ ಸಾನಿಧ್ಯ ವಹಿಸಿದ ಪೂಜ್ಯ ಭಂತೆ ಸಂಘರಖ್ಖಿತ್, ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ವಿಷ್ಣುವರ್ಧನ್ ವಾಲ್ದೊಡ್ಡಿ, ಗೌರವ ಅತಿಥಿ ಹಾಗೂ ಸಲಹೆಗಾರರಾದ ಅನಿಲ್ ಬೆಲ್ದಾರ್, ಮಾರುತಿ ಬೌದ್ದೆ, ರಮೇಶ್ ಡಾಕುಳಗಿ, ಬಾಬು ಪಾಸ್ವಾನ್, ಶ್ರೀಪತರಾವ್ ದಿನೇ, ಕಲ್ಯಾಣರಾವ್ ಭೋಸ್ಲೆ, ರಮೇಶ್ ಕಟ್ಟಿತುಗಾಂವ್, ಉಮೇಶ್ ಸ್ವಾರಳ್ಳಿಕರ್, ಸಮಿತಿ ಪದಾಧಿಕಾರಿಗಳಾದ ಶಿವಕುಮಾರ್ ನೀಲಕಟ್ಟಿ, ಅರುಣ್ ಪಟೇಲ್, ಪ್ರೇಮಕುಮಾರ್ ಕಾಂಬ್ಳೆ, ಮುಖ್ಯ ಅತಿಥಿಗಳಾದ ವಿಠಲದಾಸ್ ಪ್ಯಾಗೆ, ಪ್ರಶಾಂತ್ ದೊಡ್ಡಿ, ಗಂಗಮ್ಮ ಫುಲೆ, ಅಂಬಾದಾಸ್ ಗಾಯಕವಾಡ್, ಸಂದೀಪ್ ಕಾಂಟೆ ಹಾಗೂ ಅವಿನಾಶ್ ದಿನೇ ಸೇರಿದಂತೆ ಅನೇಕ ಗಣ್ಯರು ಮತ್ತು ನೂರಾರು ಜನ ಸೇರಿದ್ದರು.