ಬೀದರ್ | ಬೈಕ್ ನಿಂದ ಬಿದ್ದು ಓರ್ವ ಮೃತ್ಯು, ಸಹ ಸವಾರನಿಗೆ ಗಾಯ
ಓಂಕಾರ್ ಪಾಂಚಾಳ್
ಬೀದರ್ : ಬೈಕ್ ಮೇಲೆ ತೆರಳುವಾಗ ರಸ್ತೆಯ ತಿರುವು ಕಾಣದೆ ಬೈಕ್ ಮೇಲಿಂದ ಬಿದ್ದು ಓರ್ವ ವ್ಯಕ್ತಿ ಮೃತಪಟ್ಟಿದ್ದು, ಇನ್ನೊರ್ವ ಗಾಯಗೊಂಡ ಘಟನೆ ಭಾಲ್ಕಿ ತಾಲ್ಲೂಕಿನ ಭಾಟಸಾಂಗವಿ ಗ್ರಾಮದ ಹತ್ತಿರ ನಡೆದಿದೆ.
ಭಾಟಸಾಂಗವಿ ಗ್ರಾಮದ ನಿವಾಸಿ ಓಂಕಾರ್ ಪಾಂಚಾಳ್ (35) ಮೃತಪಟ್ಟ ವ್ಯಕ್ತಿ ಎಂದು ತಿಳಿದುಬಂದಿದೆ.
ಶಿವಣಿ ಗ್ರಾಮದಲ್ಲಿ ಪಿಕೆಪಿಎಸ್ ನ ಚುನಾವಣೆವಿದ್ದ ಕಾರಣ ಓಂಕಾರ್ ಮತ್ತು ಗಣೇಶ್ ಭಾಟಸಾಂಗವಿ ಗ್ರಾಮದಿಂದ ಶಿವಣಿ ಗ್ರಾಮಕ್ಕೆ ಹೋಗಿದ್ದರು. ಚುನಾವಣೆ ಮುಗಿಸಿಕೊಂಡು ಹಿಂದಿರುಗುವಾಗ ನಸುಕಿನ ಜಾವ ಸುಮಾರು 4 ಗಂಟೆಯಾಗಿತ್ತು. ಬೈಕ್ ಮೇಲೆ ಬರುವಾಗ ಕತ್ತಲಲ್ಲಿ ರಸ್ತೆಯ ತಿರುವು ಇದ್ದದ್ದು ಗೊತ್ತಾಗದೇ ಬೈಕ್ ರಸ್ತೆಯ ಪಕ್ಕದ ಹೊಲದಲ್ಲಿ ಹೋಗಿ ಬಿದ್ದಿದೆ. ಪರಿಣಾಮವಾಗಿ ಓಂಕಾರ್ ಪಾಂಚಾಳ್ ಸ್ಥಳದಲ್ಲೇ ಮೃತಪಟ್ಟಿದ್ದು, ಗಣೇಶನಿಗೆ ಗಾಯವಾಗಿದ್ದು, ಭಾಲ್ಕಿಯ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಈ ಘಟನೆಗೆ ಸಂಬಂಧಿಸಿದಂತೆ ಭಾಲ್ಕಿಯ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.