ಬೀದರ್ | ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಧರಣಿ
ಬೀದರ್ : ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಬಸವಕಲ್ಯಾಣ ತಹಶೀಲ್ದಾರ್ ಕಚೇರಿ ಎದುರುಗಡೆ ಜನರ ಧ್ವನಿ ಸಂಘಟನೆಯಿಂದ ಒಂದು ದಿನದ ಧರಣಿ ಸತ್ಯಾಗ್ರಹ ನಡೆಸಿ ಮನವಿ ಪತ್ರ ಸಲ್ಲಿಸಲಾಯಿತು.
ತಹಶೀಲ್ದಾರ್ ಮೂಲಕ ರಾಜ್ಯಪಾಲರಿಗೆ ಸಲ್ಲಿಸಿದ ಮನವಿಪತ್ರದಲ್ಲಿ, ಭಾಲ್ಕಿ ತಾಲ್ಲೂಕಿನಲ್ಲಿ ದಲಿತರ ಮೇಲೆ ದೌರ್ಜನ್ಯ ಹೆಚ್ಚಾಗುತ್ತಿದ್ದು, ಕಳೆದ ಒಂದು ವರ್ಷದಲ್ಲಿ ನಿರಂತರವಾಗಿ ದಲಿತರ ಮೇಲೆ ದೌರ್ಜನ್ಯಗಳು ನಡೆಯುತ್ತಿವೆ. ಒಂದೇ ವರ್ಷದಲ್ಲಿ ತಾಲ್ಲೂಕಿನ ಮಳಚಾಪೂರ, ತಳವಾಡ (ಕೆ), ರಾಚಪ್ಪ ಗೌಡಗಾಂವ ಮತ್ತು ಚಳಕಾಪುರದಲ್ಲಿ ದಲಿತರ ಮೇಲೆ ದೌರ್ಜನ್ಯ ಎಸಗಿದ್ದಾರೆ.
ಮರೂರ್ ಗ್ರಾಮದ ದಲಿತ ಸಮುದಾಯಕ್ಕೆ ಸೇರಿದ ವ್ಯಕ್ತಿ ಶಿವರಾಜ ಮೂಲಗೆಯವರ ಜಮೀನು ಸರ್ವೆ ನಂ. 78 ರಲ್ಲಿ 3 ಎಕರೆ ಜಮೀನನ್ನು ಮೇಲ್ವರ್ಗದ 13 ಜನ ಸ್ವಾಧೀನಪಡಿಸಿಕೊಂಡಿದ್ದು, ಇವರ ವಿರುದ್ಧ ಠಾಣೆಗೆ ದೂರು ನೀಡಲು ಹೋದಾಗ ಠಾಣೆಯಲ್ಲಿ ಕೇಸ್ ದಾಖಲಿಸದೇ ಹಿಂದಿರುಗಿಸಿದ್ದಾರೆ ಎಂದು ಆರೋಪಿಸಿದ್ದರು.
ಹುಲಸೂರ ತಾಲ್ಲೂಕಿನ ಮಿರಕಲ್ ತಾಂಡಾದ ಜನರ ಜಮೀನಿನ ಸಿ ಫಾರಂ ಪಹಣಿ ಹೊಲ್ಡಿಂಗ್ ಮತ್ತು ಹಕ್ಕು ಪತ್ರ ಇದ್ದರೂ ಕೂಡಾ ಇವರ ಜಮೀನಿನಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಗಿಡಗಳು ನೆಡುತ್ತಿದ್ದಾರೆ. ಇದನ್ನು ಕೂಡಲೆ ನಿಲ್ಲಿಸಬೇಕೆಂದು ತಮ್ಮ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ.
ಭಾಲ್ಕಿ ಡಿ.ವೈ.ಎಸ್.ಪಿ. ಶಿವಾನಂದ ಅವರನ್ನು ಸೇವೆಯಿಂದ ಅಮಾನತುಗೊಳಿಸಬೇಕು. ಅಮಾನತುಗೊಳಿಸದಿದ್ದರೆ ಮುಂದಿನ ದಿನಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ಜಿಲ್ಲಾದ್ಯಂತ ಹೋರಾಟ ಮಾಡಲಾಗುವುದೆಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ಹಿರಿಯ ಮುಖಂಡ ತಿಪ್ಪಣ್ಣಾ ವಾಲಿ, ಜಿಲ್ಲಾಧ್ಯಕ್ಷ ರಾಜಕುಮಾರ ಸಿಂಧೆ, ತಾಲ್ಲೂಕು ಅಧ್ಯಕ್ಷ ಮಾರುತಿ ಕಾಂಬ್ಳೆ, ವಿಜಯ ಕಾಂಬ್ಳೆ, ಪ್ರಶಾಂತ್ ದಲಾಲೆ, ಶುಭಂ ಕಾಂಬ್ಳೆ, ಮಯೂರ ದಲಾಲೆ ಸೇರಿದಂತೆ ಇನ್ನು ಹಲವರು ಭಾಗವಹಿಸಿದ್ದರು.