ಬೀದರ್ | ವಚನಗಳ ಪಾಲನೆಯಿಂದ ಜೀವನ ಪಾವನ : ಎನ್.ಕೆ.ಫಣೀಂದ್ರ
ಬೀದರ್ : ವಚನಗಳ ಪಾಲನೆಯಿಂದ ಜೀವನ ಪಾವನವಾಗಲಿದೆ ಎಂದು ಕರ್ನಾಟಕ ಲೋಕಾಯುಕ್ತ ಇಲಾಖೆಯ ಉಪಲೋಕಾಯುಕ್ತ ಎನ್.ಕೆ.ಫಣೀಂದ್ರ ಅಭಿಪ್ರಾಯಪಟ್ಟರು.
ಭಾಲ್ಕಿಯ ಚನ್ನಬಸವಾಶ್ರಮದಲ್ಲಿ ಹಿರೇಮಠ ಸಂಸ್ಥಾನದ ವತಿಯಿಂದ ಆಯೋಜಿಸಿದ ಡಾ.ಚನ್ನಬಸವ ಪಟ್ಟದ್ದೇವರ 135ನೆಯ ಜಯಂತ್ಯೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಬಸವಣ್ಣನವರ ಒಂದೊಂದು ವಚನಗಳಲ್ಲಿ ಬದುಕಿನ ಮೌಲ್ಯಗಳು ಅಡಗಿವೆ. ಮನುಷ್ಯನಲ್ಲಿನ ರಾಕ್ಷಸ ಗುಣಗಳನ್ನು ಹೊಗಲಾಡಿಸುವ ಅದ್ಭುತ ಶಕ್ತಿ ವಚನಗಳಲ್ಲಿವೆ ಎನ್ನುವುದನ್ನು ಎಲ್ಲರೂ ತಿಳಿದುಕೊಳ್ಳಬೇಕು. ಬಸವಣ್ಣನವರು 12ನೇ ಶತಮಾನದಲ್ಲಿಯೇ ಸಮಾನತೆಗಾಗಿ ಹೋರಾಟ ನಡೆಸಿದರು. ಅಂತರ್ಜಾತಿ ವಿವಾಹ ಮಾಡಿಸುವ ಮೂಲಕ ಜಾತಿ ವ್ಯವಸ್ಥೆಯನ್ನು ಧಿಕ್ಕರಿಸಿ ಮಾನವ ಜಾತಿ ಒಂದೇ ಎನ್ನುವುದನ್ನು ಸಾರಿದರು ಎಂದು ತಿಳಿಸಿದರು.
ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು ಕೂಡ ಧಾರ್ಮಿಕ, ಶೈಕ್ಷಣಿಕ ಕಾರ್ಯಗಳ ಜತೆಗೆ ಅನಾಥ ಮಕ್ಕಳ ಪಾಲನೆ ಪೋಷಣೆ, ಬಡ ಮಕ್ಕಳಿಗೆ ಉಚಿತ ಶಿಕ್ಷಣ ಕಲ್ಪಿಸುತ್ತಿರುವುದು ಮಾದರಿಯಾಗಿದ್ದರು ಎಂದರು.
ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು ದಿವ್ಯ ಸಾನ್ನಿಧ್ಯ ವಹಿಸಿದರು. ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅಧ್ಯಕ್ಷತೆ ವಹಿಸಿದರು. ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ್ ಕೋಸಂಬೆ ಸ್ವಾಗತಿಸಿದರು. ಮಧುಕರ್ ಗಾಂವಕರ್ ನಿರೂಪಿಸಿದರು. ಸಿದ್ರಾಮೇಶ್ವರ್ ಪಾಟೀಲ್ ವಂದಿಸಿದರು.
ಈ ಸಂದರ್ಭದಲ್ಲಿ ಜಿ.ಪಂ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ್ ಬದೋಲೆ, ಹಿರಿಯ ನ್ಯಾಯವಾದಿ ರಾಜಶೇಖರ್ ಅಷ್ಟೂರೆ, ತಾಲೂಕು ರೋಟರಿ ಅಧ್ಯಕ್ಷ ಸಂಜುಕುಮಾರ್ ಪಂಡರಗೇರೆ ಹಾಗೂ ನೂರಾರು ಜನರು ಭಾಗವಹಿಸಿದ್ದರು.