ಬೀದರ್ | ವಿಜಯೇಂದ್ರ ನೇತೃತ್ವದಲ್ಲಿ ಡಿ.4 ರಂದು ವಕ್ಫ್ ಕಾರ್ಯಾಲಯಕ್ಕೆ ಮುತ್ತಿಗೆ : ಪ್ರಕಾಶ್ ಖಂಡ್ರೆ
ಬೀದರ್ : ಬಿಜೆಪಿ ರಾಜ್ಯಧ್ಯಕ್ಷ ವಿಜಯೇಂದ್ರ ನೇತೃತ್ವದಲ್ಲಿ ಡಿ.4 ರಂದು ನಗರದಲ್ಲಿರುವ ವಕ್ಫ್ ಬೋರ್ಡ್ ಕಾರ್ಯಾಲಯಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಮಾಜಿ ಶಾಸಕ ಪ್ರಕಾಶ್ ಖಂಡ್ರೆ ತಿಳಿಸಿದ್ದಾರೆ.
ಭಾಲ್ಕಿಯ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಬಡವರ, ರೈತರ, ಶ್ರಮಿಕರ, ಮಠಗಳ, ದೇವಸ್ಥಾನಗಳ ಜಮೀನುಗಳನ್ನು ಅಕ್ರಮವಾಗಿ ಕಬಳಿಸಲು ರಾಜ್ಯ ಸರಕಾರ ಷಡ್ಯಂತ್ರ ನಡೆಸುತ್ತಿದೆ. ಜಿಲ್ಲೆಯಲ್ಲಿ ಅನೇಕ ರೈತರ ಪಹಣಿಯಲ್ಲಿ ವಕ್ಫ್ ಬೋರ್ಡ್ ಹೆಸರು ನಮೂದಾಗಿದೆ. ಹಾಗೆಯೇ ಈಗಾಗಲೇ ಜಿಲ್ಲಾಡಳಿತದಿಂದ ಜಿಲ್ಲೆಯ ರೈತರಿಗೆ ನೋಟಿಸ್ ಕೂಡ ರವಾನೆಯಾಗಿದೆ. ಜಿಲ್ಲೆಯಲ್ಲಿ ರೈತರ, ಮಠ ಮಂದಿರ ಸೇರಿ ಸುಮಾರು 12 ರಿಂದ 13 ಸಾವಿರ ಪಹಣಿಯಲ್ಲಿ ವಕ್ಫ್ ಬೋರ್ಡ್ ಹೆಸರು ಬಂದಿದೆ. ಸರಕಾರದ ನಡೆಯನ್ನು ಖಂಡಿಸಿ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಅಂದು ಗಾಂಧಿ ಗಂಜಿನಲ್ಲಿ ರೈತರ ಜೊತೆ ಸಂವಾದ ನಡೆಸಿ ನಂತರ ಬಸವೇಶ್ವರ, ಡಾ.ಅಂಬೇಡ್ಕರ್ ವೃತ್ತ ಮಾರ್ಗವಾಗಿ ವಕ್ಫ್ ಬೋರ್ಡ್ ಕಾರ್ಯಾಲಯಕ್ಕೆ ಮುತ್ತಿಗೆ ಹಾಕಲಿದ್ದೇವೆ. ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ವೈ.ವಿಜಯೇಂದ್ರ ಅವರ ನೇತೃತ್ವದಲ್ಲಿಯೇ ಈ ಹೋರಾಟ ನಡೆಯಲಿದೆ ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ ಸುಮಾರು 15 ರಿಂದ 20 ಸಾವಿರ ಜನ ಸೇರುವ ನಿರೀಕ್ಷೆ ಇದೆ ಎಂದು ಮಾಹಿತಿ ನೀಡಿದ್ದಾರೆ.